ಗೋಕರ್ಣ : ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿರುವ ಪುರಾತನ ಕಲ್ಲಿನ ವಿಗ್ರಹವು ದಿನಕಳೆದಂತೆ ಸವೆದು ಹೋಗುತ್ತಿರುವುದನ್ನು ತಡೆಯಲು ಮುಜರಾಯಿ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಭಕ್ತರು ಗಣೇಶನ ವಿಗ್ರಹವನ್ನು ಸ್ಪರ್ಶಿಸುವುದು ಹಾಗೂ ಅಭಿಷೇಕ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಲವಾರ ಅವರು ಅಧಿಕೃತ ಆದೇಶ ಜಾರಿ ಮಾಡಿದ್ದಾರೆ.
ದೇವಸ್ಥಾನದ ಅರ್ಚಕ ವೃಂದ ಹಾಗೂ ಸ್ಥಳೀಯ ಸಾರ್ವಜನಿಕರೊಂದಿಗೆ ನಡೆಸಿದ ಸಭೆಯಲ್ಲಿ ಈ ಕಠಿಣ ತೀರ್ಮಾನವನ್ನು ಪ್ರಕಟಿಸಲಾಗಿದ್ದು, ಶಿಫ್ಟ್ ಇನ್ಚಾರ್ಜ್ ಅರ್ಚಕರನ್ನು ಹೊರತುಪಡಿಸಿ ಇನ್ಯಾರೇ ವಿಐಪಿಗಳು, ಇತರ ಅರ್ಚಕರು ಅಥವಾ ಸಾಮಾನ್ಯ ಭಕ್ತರಿಗೆ ಗರ್ಭಗುಡಿಯೊಳಗೆ ಪ್ರವೇಶಿಸಲು ಅವಕಾಶವಿಲ್ಲ. ಇನ್ನು ಮುಂದೆ ದೇವಸ್ಥಾನಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತಾದಿಗಳು ಗರ್ಭಗುಡಿಯ ಹೊರಗಿನಿಂದಲೇ ದೂರದಲ್ಲಿದ್ದು ದೇವರ ದರ್ಶನ ಪಡೆಯಲು ಹಾಗೂ ಆರತಿ ನೆರವೇರಿಸಲು ಸೂಚಿಸಲಾಗಿದೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಈ ಅಪರೂಪದ ಶಿಲಾ ವಿಗ್ರಹವು ನಿರಂತರ ಸ್ಪರ್ಶ ಮತ್ತು ಅಭಿಷೇಕಗಳಿಂದಾಗಿ ಭಗ್ನಗೊಳ್ಳುವ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ವಿಗ್ರಹದ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳೀಯರು ಹಾಗೂ ಭಕ್ತಾದಿಗಳು ಸುದೀರ್ಘ ಕಾಲದಿಂದ ವಿನಂತಿಸುತ್ತಿದ್ದರು. ಸಾರ್ವಜನಿಕರ ಹಿತದೃಷ್ಟಿ ಮತ್ತು ಪರಂಪರೆಯ ರಕ್ಷಣೆಯ ಉದ್ದೇಶದಿಂದ ಮುಂದಿನ ಆದೇಶದವರೆಗೆ ಈ ನಿಯಮಗಳು ಜಾರಿಯಲ್ಲಿರಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










