ಬಂಟ್ವಾಳ : ಅರ್ಹತಾ ಪತ್ರ ಹಾಗೂ ವಿಮೆ ರಹಿತ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ದು ಮಗುವಿನ ಸಾವಿಗೆ ಪರೋಕ್ಷ ಕಾರಣರಾದರೆಂಬ ಗಂಭೀರ ಆರೋಪದಡಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಹಾಗೂ ಮುಖ್ಯಸ್ಥರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸರು ಈಗ ಎಫ್ಐಆರ್ ಹೂಡಿದ್ದಾರೆ.
ಘಟನೆ ನಡೆದ ತಕ್ಷಣ BNS ಕಾಯ್ದೆಯಡಿ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಾದೇಶಿಕ ಸಾರಿಗೆ ಕಚೇರಿಯಿಂದ (RTO) ವಾಹನದ ದಾಖಲೆಗಳ ಪರಿಶೀಲನಾ ವರದಿ ಪಡೆದಿದ್ದರು. ತನಿಖೆ ವೇಳೆ ದುರಂತ ಸಂಭವಿಸಿದ ಶಾಲಾ ವಾಹನಕ್ಕೆ ಘಟನೆಯ ಸಮಯದಲ್ಲಿ ಚಾಲ್ತಿಯಲ್ಲಿದ್ದ ವಿಮೆ (Insurance) ಹಾಗೂ ಅರ್ಹತಾ ಪತ್ರ (Fitness Certificate) ಇರಲಿಲ್ಲ ಎಂಬ ಗಂಭೀರ ಸಂಗತಿ ಬೆಳಕಿಗೆ ಬಂದಿದೆ.
ಇದಷ್ಟೇ ಅಲ್ಲದೆ, ಸದರಿ ವಾಹನವು ಶ್ರೀರಾಮ ವಿದ್ಯಾಕೇಂದ್ರದ ಹೆಸರಿನಲ್ಲಿ ನೋಂದಣಿಯಾಗದೆ ಬೇರೊಂದು ಟ್ರಸ್ಟ್ನ ಮಾಲೀಕತ್ವದಲ್ಲಿತ್ತು ಎಂದು ತಿಳಿದುಬಂದಿದೆ. ಸೂಕ್ತ ದಾಖಲೆಗಳಿಲ್ಲದಿದ್ದರೂ ವಿದ್ಯಾರ್ಥಿಗಳ ಪ್ರಾಣಕ್ಕೆ ಕಂಟಕವಾಗುವ ರೀತಿಯಲ್ಲಿ ವಾಹನವನ್ನು ಚಲಾಯಿಸಲು ಕಾರಣರಾದ ಶ್ರೀರಾಮ ವಿದ್ಯಾಕೇಂದ್ರದ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ BNS ಹಾಗೂ ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










