ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಸಾಂಪ್ರದಾಯಿಕ ಟ್ಯಾಕ್ಸಿಗಳಿಗೆ ಅಗೌರವ ಹಾಗೂ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಟ್ಯಾಕ್ಸಿಮೆನ್ಸ್ ಹಾಗೂ ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಜಂಟಿಯಾಗಿ ಕಾವೂರು ಜಂಕ್ಷನ್ನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದವು. ನೂರಾರು ಚಾಲಕರು ಹಾಗೂ ಮಾಲಕರು ಭಾಗವಹಿಸಿದ್ದ ಈ ಧರಣಿಯಲ್ಲಿ, ಏರ್ಪೋರ್ಟ್ ಪ್ರಾಧಿಕಾರದ ಅವೈಜ್ಞಾನಿಕ ಪಾರ್ಕಿಂಗ್ ಶುಲ್ಕ ಮತ್ತು ತಾರತಮ್ಯದ ನೀತಿಗಳನ್ನು ಉಗ್ರವಾಗಿ ಖಂಡಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಟ್ಯಾಕ್ಸಿಮೆನ್ಸ್ ಸಂಘದ ಅಧ್ಯಕ್ಷ ಆನಂದ್ ಕೆ., ಸರ್ಕಾರದ ಎಲ್ಲಾ ನಿಯಮ ಹಾಗೂ ತೆರಿಗೆ ಪಾವತಿಸಿ ನ್ಯಾಯಯುತವಾಗಿ ಉದ್ಯೋಗ ಮಾಡುವ ಸ್ಥಳೀಯ ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ. ಖಾಸಗಿ ವಾಹನಗಳಿಗೆ ನೀಡುವ ವಿಶೇಷ ಆದ್ಯತೆಯನ್ನು ಸಾಂಪ್ರದಾಯಿಕ ಟ್ಯಾಕ್ಸಿಗಳಿಗೆ ನೀಡದಿರುವುದು ಕ್ಷಮಿಸಲು ಅರ್ಹವಲ್ಲ; ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಉಡುಪಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಮತ್ತು ಹಿರಿಯ ಸದಸ್ಯ ಪ್ರಮೋದ್ ಕುಮಾರ್ ಉಳ್ಳಾಲ್ ಮಾತನಾಡಿ, ನಿರುದ್ಯೋಗಿ ಯುವಕರಿಗೆ ಆಸರೆಯಾಗಿರುವ ಸಾಂಪ್ರದಾಯಿಕ ಟ್ಯಾಕ್ಸಿ ಚಾಲಕರ ಶ್ರಮವನ್ನು ಖಾಸಗಿ ಆಡಳಿತ ಮಂಡಳಿ ಸುಲಿಗೆ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ಭೇಟಿ ನೀಡಿದ ಉಪ ತಾಲೂಕು ದಂಡಾಧಿಕಾರಿ ನವೀನ್ ಕುಮಾರ್ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ, ಜಿಲ್ಲಾಡಳಿತದ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತಾಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿ, ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಟ್ಯಾಕ್ಸಿ ಚಾಲಕರ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಉಭಯ ಜಿಲ್ಲೆಗಳ ವಿವಿಧ ಸಂಘಟನೆಗಳ ನೂರಾರು ಸದಸ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಸಂತೋಷ್ ಕೊಲ್ಯ ನಿರೂಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









