
ಬಂಟ್ವಾಳ : ಆಟಿ ಅಮಾವಾಸ್ಯೆಯ ಪವಿತ್ರ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ನರಹರಿ ಪರ್ವತ ಹಾಗೂ ಕಾರಿಂಜೇಶ್ವರ ದೇವಸ್ಥಾನಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿದರು. ಮುಂಜಾನೆಯಿಂದಲೇ ಸುರಿದ ಧೋ ಧೋ ಮಳೆಯನ್ನೂ ಲೆಕ್ಕಿಸದೆ ಆಗಮಿಸಿದ ಸಾರ್ವಜನಿಕರು ಮತ್ತು ನವವಧುವರರು, ಪರ್ವತಗಳನ್ನು ಏರಿ ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆದರು. ಸಂತಾನ ಭಾಗ್ಯಕ್ಕಾಗಿ ಇಲ್ಲಿನ ತೀರ್ಥ ಕೂಪಗಳಲ್ಲಿ ಸ್ನಾನ ಮಾಡುವುದು ಬಹುಕಾಲದ ಧಾರ್ಮಿಕ ನಂಬಿಕೆಯಾಗಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದಲ್ಲಿರುವ ನರಹರಿ ಪರ್ವತ ಸದಾಶಿವ ಕ್ಷೇತ್ರದಲ್ಲಿ ಭಕ್ತರು ಶಂಖ, ಚಕ್ರ, ಗದಾ, ಪದ್ಮ ಎಂಬ ನಾಲ್ಕು ಪವಿತ್ರ ಕುಂಡಗಳಲ್ಲಿ ಮಿಂದೆದ್ದು ಶ್ರೀ ಸದಾಶಿವ, ನಾಗದೇವರು ಮತ್ತು ಗಣಪತಿಗೆ ಪೂಜೆ ಸಲ್ಲಿಸಿದರು. ಸಮುದ್ರ ಮಟ್ಟದಿಂದ ಸುಮಾರು 1,000 ಅಡಿ ಎತ್ತರದಲ್ಲಿರುವ ಈ ಧಾಮದಲ್ಲಿ ಆಟಿ ಅಮಾವಾಸ್ಯೆಯಂದು ತೀರ್ಥಸ್ನಾನ ಮಾಡುವುದರಿಂದ ಪಾಪಗಳು ನಾಶವಾಗಿ ಆಯುರಾರೋಗ್ಯ ವೃದ್ಧಿಸುತ್ತದೆ ಎಂಬ ವಿಶ್ವಾಸ ಭಕ್ತರಲ್ಲಿದೆ. ಪ್ರಸ್ತುತ ಆಡಳಿತ ಮೊಕ್ತೇಸರ ಡಾ. ಪ್ರಶಾಂತ್ ಮಾರ್ಲ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ್ ರೈ ನೇತೃತ್ವದಲ್ಲಿ ₹6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಜರುಗುತ್ತಿವೆ.
ಇತ್ತ ಮಂಗಳೂರು-ಬೆಳ್ತಂಗಡಿ ಮಾರ್ಗದ ವಗ್ಗ ಸಮೀಪವಿರುವ ಕಾರಿಂಜೇಶ್ವರ ಸನ್ನಿಧಿಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಸುಪ್ರಸಿದ್ಧ ಹಾಳೆ ಮರದ ಕೆತ್ತೆಯ ಕಷಾಯ ವಿತರಿಸಲಾಯಿತು. ದೇವಸ್ಥಾನದ ಕೆಳಗಿರುವ ಗದಾ ತೀರ್ಥ ಸರೋವರದಲ್ಲಿ ಸ್ನಾನ ಮಾಡಿದ ಭಕ್ತಾದಿಗಳು, ಬಳಿಕ ಬೆಟ್ಟವನ್ನೇರಿ ಪಾರ್ವತಿ ಪರಮೇಶ್ವರರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ವೀರೇಂದ್ರ ಅಮೀನ್ ಮಾತನಾಡಿ, ಜಿಲ್ಲೆಯಾದ್ಯಂತ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಲ ಸೌಕರ್ಯ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









