ಮಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರಿಗೆ ಕಾನೂನಾತ್ಮಕ ಸಂಕಷ್ಟಗಳು ದಿನದಿಂದ ದಿನಕ್ಕೆ ಬಿಗಿಯಾಗುತ್ತಿರುವ ಬೆನ್ನಲ್ಲೇ, ಅವರ ಪತ್ನಿ ವಿಜಯಲಕ್ಷ್ಮಿ ಅವರು ಕರಾವಳಿಯ ಕಾರಣಿಕ ದೈವಗಳ ಮೊರೆ ಹೋಗಿದ್ದಾರೆ. ಈ ಪ್ರಕರಣದ ಎ14 ಆರೋಪಿ ಪ್ರದೋಷ್ ಕೋರ್ಟ್ ಮುಂದೆ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿ, ಸಂಪೂರ್ಣ ಸತ್ಯ ಬಯಲು ಮಾಡುವುದಾಗಿ ಹೇಳಿಕೆ ನೀಡಿರುವುದು ನಟ ದರ್ಶನ್ಗೆ ಮತ್ತಷ್ಟು ಹಿನ್ನಡೆಯುಂಟುಮಾಡಿದೆ. ಈ ಹಿನ್ನೆಲೆಯಲ್ಲಿ ನಟನ ಬಿಡುಗಡೆಗಾಗಿ ಪತ್ನಿ ದೈವಸನ್ನಿಧಾನಗಳಲ್ಲಿ ಮೊರೆ ಇಡುತ್ತಿದ್ದಾರೆ.
ಶನಿವಾರ (ಆಗಸ್ಟ್ 22) ಮಂಗಳೂರಿಗೆ ಆಗಮಿಸಿದ ವಿಜಯಲಕ್ಷ್ಮಿ ಅವರು ಪ್ರಸಿದ್ಧ ಶ್ರೀಕ್ಷೇತ್ರ ಮಂದಾರ ಬೈಲುಗೆ ಭೇಟಿ ನೀಡಿ, ರಕ್ತೇಶ್ವರಿ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದಾರೆ. ಇದಾದ ಬಳಿಕ ಬಂಟ್ವಾಳ ತಾಲೂಕಿನ ಐತಿಹಾಸಿಕ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೂ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಗಂಧಪ್ರಸಾದ ಸ್ವೀಕರಿಸಿದರು. ನಂತರ ಮಂಗಳೂರಿನ ಕುತ್ತಾರಿನಲ್ಲಿರುವ ಶ್ರೀ ಕೊರಗಜ್ಜ ಕ್ಷೇತ್ರಕ್ಕೂ ಭೇಟಿ ನೀಡಿ ದೈವದ ಆಶೀರ್ವಾದ ಪಡೆದರು.
ದರ್ಶನ್ ಜೈಲುಪಾಲಾದ ಕ್ಷಣದಿಂದಲೂ ಅವರು ಶೀಘ್ರದಲ್ಲೇ ಈ ಎಲ್ಲಾ ಕಷ್ಟಗಳಿಂದ ಮುಕ್ತರಾಗಿ ಹೊರಬರಲೆಂದು ಆಶಿಸಿ ವಿಜಯಲಕ್ಷ್ಮಿ ಅವರು ರಾಜ್ಯದ ಹಲವು ಪ್ರಮುಖ ದೇವಾಲಯ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









