ಮಂಗಳೂರು : ಬಂಟ್ವಾಳ ತಾಲೂಕಿನಲ್ಲಿ ನಡೆದಿದ್ದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣವು ಇದೀಗ ಕರಾವಳಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಹಿರಿಯ ಆರ್ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ. ಕಳೆದ ವರ್ಷದ ಮೇ 25ರಂದು ನಡೆದಿದ್ದ ಈ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ಪ್ರಭಾಕರ್ ಭಟ್ ಅವರು ನಿರಂತರ ದೂರವಾಣಿ ಸಂಪರ್ಕದಲ್ಲಿದ್ದರು ಎಂಬ ತನಿಖಾ ಮಾಹಿತಿಯ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಶನಿವಾರವೇ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದ್ದಾರೆ.
ಪೋಲೀಸರ ಈ ಹಠಾತ್ ಕ್ರಮವು ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಹಾಗೂ ಬಜರಂಗದಳ, ಇದು ಕಾಂಗ್ರೆಸ್ ಸರ್ಕಾರದ ವ್ಯವಸ್ಥಿತ ರಾಜಕೀಯ ಪ್ರೇರಿತ ಪಿತೂರಿ ಎಂದು ಆರೋಪಿಸಿವೆ. ಈಗಾಗಲೇ ಎರಡು ಬಾರಿ ಚಾರ್ಜ್ಶೀಟ್ ಸಲ್ಲಿಕೆಯಾಗಿರುವ ಪ್ರಕರಣದಲ್ಲಿ ಇದೀಗ ವಿಚಾರಣೆಯ ನೆಪವೊಡ್ಡಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ವಿಹೆಚ್ಪಿ ನಾಯಕ ಶರಣ್ ಪಂಪ್ವೆಲ್ ಕಡಾಖಂಡಿತವಾಗಿ ಹೇಳಿದ್ದಾರೆ.
ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಬಿ.ಸಿ. ರೋಡ್ ಚಲೋ ಚಳವಳಿಯ ಬೆನ್ನಲ್ಲೇ ಈ ನೋಟಿಸ್ ನೀಡಿರುವುದು ಕರಾವಳಿಯಲ್ಲಿ ಹಿಂದೂಗಳ ಧ್ವನಿಯನ್ನು ಅಡಗಿಸುವ ಯತ್ನವಾಗಿದೆ ಎಂದು ವಾಗ್ದಾಳಿ ನಡೆಸಿದ ಪಂಪ್ವೆಲ್, ಪ್ರಭಾಕರ್ ಭಟ್ ಅವರಿಗೆ ನೀಡಲಾಗಿರುವ ನೋಟಿಸ್ ಅನ್ನು ಪೊಲೀಸರು ತಕ್ಷಣವೇ ಹಿಂಪಡೆಯಬೇಕು, ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಭಜರಂಗದಳ ಹಾಗೂ ಹಿಂದೂ ಕಾರ್ಯಕರ್ತರು ಉಗ್ರ ಹೋರಾಟಕ್ಕಾಗಿ ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









