ಮಂಗಳೂರು : ಕರ್ನಾಟಕ ಸರ್ಕಾರ ಅಧಿಕೃತವಾಗಿ ಪ್ರಕಟಿಸಿರುವ ದಸರಾ ರಜೆಯ ಅವಧಿಯಲ್ಲಿ ಪರೀಕ್ಷೆ ಹಾಗೂ ತರಗತಿಗಳನ್ನು ನಡೆಸಿ, ಹಿಂದೂ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಬ್ಬದ ಆಚರಣೆಯಿಂದ ವಂಚಿಸುತ್ತಿರುವ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ವಿರುದ್ಧ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿಯೂ ದಸರಾ ರಜೆ ನೀಡದೆ ನಿಯಮ ಉಲ್ಲಂಘಿಸಿದರೆ ರಾಜ್ಯಾದ್ಯಂತ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನ್ವೆಂಟ್ ಶಾಲೆಗಳ ರಜೆ ಕಡಿತದ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಲ್ಲದೆ, ರಾಮ ಸೇನೆ ಹಾಗೂ ಶ್ರೀರಾಮ ಸೇನೆ ಸಂಘಟನೆಗಳು ಒಂದಾಗಿ ಕಾರ್ಯನಿರ್ವಹಿಸುವ ಕುರಿತೂ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದರು.
ಕರ್ನಾಟಕ ಸರ್ಕಾರವು ಅಧಿಕೃತವಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 3 ರಿಂದ 21 ರವರೆಗೆ 20 ದಿನಗಳ ದಸರಾ ರಜೆಯನ್ನು ಘೋಷಿಸಿದೆ. ಆದರೆ, ಹೆಚ್ಚಿನ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳು ಈ ಅವಧಿಯಲ್ಲಿ ಪರೀಕ್ಷೆಗಳನ್ನು ಇಟ್ಟು, ಶಾಲೆ ನಡೆಸಿ ಪಠ್ಯ ಬೋಧನೆ ಮಾಡುತ್ತಿವೆ. ದಸರಾ ರಜೆಯನ್ನು ಕಡಿತಗೊಳಿಸಿ, ಅದನ್ನು ಕ್ರಿಸ್ಮಸ್ ಹಬ್ಬಕ್ಕೆ ಶೇರ್ ಮಾಡಿಕೊಂಡು 10 ದಿನಗಳ ರಜೆ ನೀಡುತ್ತಿರುವುದು ಸಂಪೂರ್ಣ ಅನ್ಯಾಯ ಹಾಗೂ ಖಂಡನೀಯ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಕಾನ್ವೆಂಟ್ ಶಾಲೆಗಳಲ್ಲಿ ಶೇ. 99 ರಷ್ಟು ಹಿಂದೂ ವಿದ್ಯಾರ್ಥಿ-ವಿದ್ಯಾರ್ಥಿನಿಯರೇ ವ್ಯಾಸಂಗ ಮಾಡುತ್ತಿದ್ದು, ಶೇ. 99 ರಷ್ಟು ಶಿಕ್ಷಕ-ಶಿಕ್ಷಕಿಯರೂ ಹಿಂದೂಗಳೇ ಆಗಿದ್ದಾರೆ. ದಸರಾ ಎಂಬುದು ಅತ್ಯಂತ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಮಹಾಪರ್ವವಾಗಿದೆ. ಹಬ್ಬದ ದಿನಗಳಲ್ಲಿ ಮಕ್ಕಳಿಗೆ ಪರೀಕ್ಷೆ ಇಟ್ಟರೆ ಇಡೀ ಕುಟುಂಬ ಗಂಭೀರತೆಯಿಂದ ಹಬ್ಬ ಆಚರಿಸಲು ಸಾಧ್ಯವಾಗುವುದಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೇರುವ, ತೊಂದರೆ ಕೊಡುವ ಹಾಗೂ ಸಾಂಸ್ಕೃತಿಕ ಮತಾಂತರ ಮಾಡುವ ವ್ಯವಸ್ಥಿತ ಪ್ರಕ್ರಿಯೆಯಾಗಿದೆ ಎಂದು ಅವರು ಆರೋಪಿಸಿದರು.
ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ:
ಕಳೆದ ವರ್ಷವೂ ನಾವು ಶಿಕ್ಷಣ ಸಚಿವರಿಂದ ಹಿಡಿದು ಡಿಡಿಪಿಐ, ಬಿಇಒ ಹಾಗೂ ಎಲ್ಲಾ ಕಾನ್ವೆಂಟ್ ಶಾಲೆಗಳಿಗೆ ಮನವಿ ಕೊಟ್ಟಿದ್ದೆವು. ಕೆಲವು ಕಡೆಗಳಲ್ಲಿ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ಮೇಲೆಯೂ ಕೇಸ್ ಹಾಕಿದ್ದೆವು. ಈ ಬಾರಿಯೂ ಇದು ಮುಂದುವರಿದರೆ ರಾಜ್ಯಾದ್ಯಂತ ಎಲ್ಲಾ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ಎದುರು ಧರಣಿ ನಡೆಸಲಾಗುವುದು. ಕ್ರಿಸ್ಮಸ್ಗೆ 10 ದಿನಗಳ ರಜೆ ನೀಡುವ ಅಗತ್ಯವಿಲ್ಲ, ಡಿಸೆಂಬರ್ 25 ರಂದು ಒಂದೇ ದಿನ ರಜೆ ನೀಡಿದರೆ ಸಾಕು. ಈ ಕುರಿತು ಶಿಕ್ಷಣ ಸಚಿವರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಾಮ ಸೇನೆ ಹಾಗೂ ಶ್ರೀರಾಮ ಸೇನೆ ಒಗ್ಗೂಡುವಿಕೆ , ಒಂದೇ ಬ್ಯಾನರ್ ಅಡಿಯಲ್ಲಿ ಸಂಘಟನೆ ಬಲವರ್ಧನೆ: ಪ್ರಮೋದ್ ಮುತಾಲಿಕ್
ಅನಾರೋಗ್ಯದಿಂದ ಬಳಲುತ್ತಿರುವ ರಾಮ ಸೇನೆಯ ನಾಯಕ ಪ್ರಸಾದ್ ಅತ್ತಾವರ ಅವರನ್ನು ಭೇಟಿಯಾಗಿ ಕ್ಷೇಮ ವಿಚಾರಿಸಿದ್ದು, ಈ ವೇಳೆ ಸಂಘಟನಾತ್ಮಕ ವಿಷಯಗಳ ಕುರಿತು ದೀರ್ಘ ಚರ್ಚೆ ನಡೆಸಲಾಗಿದೆ. ಇನ್ಮುಂದೆ ರಾಮ ಸೇನೆ ಮತ್ತು ಶ್ರೀರಾಮ ಸೇನೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಲಾಗಿದೆ. ಇಡೀ ರಾಜ್ಯಾದ್ಯಂತ ‘ಶ್ರೀರಾಮ ಸೇನೆ’ ಎಂಬ ಒಂದೇ ಸಂಘಟನೆಯ ಹೆಸರಿನಲ್ಲಿ ಕಾರ್ಯಕರ್ತರು ಒಗ್ಗೂಡಿ ಸಂಘಟನೆಯನ್ನು ಬಲಪಡಿಸಲಿದ್ದಾರೆ ಎಂದು ಮುತಾಲಿಕ್ ಪ್ರಕಟಿಸಿದರು.
ಜಂಟಿ ರಾಜ್ಯ ಪ್ರವಾಸ: ಪ್ರಸಾದ್ ಅತ್ತಾವರ ಅವರ ಆರೋಗ್ಯ ಚೇತರಿಸಿಕೊಂಡ ನಂತರ ಇಬ್ಬರೂ ಸೇರಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಂಘಟನೆಯನ್ನು ಮತ್ತಷ್ಟು ಸಕ್ರಿಯಗೊಳಿಸಲಿದ್ದೇವೆ. ರಾಮ ಸೇನೆಯ ರಾಜ್ಯ ಪದಾಧಿಕಾರಿಗಳೂ ಸಹ ಈ ನಿರ್ಧಾರಕ್ಕೆ ಸಮ್ಮತಿಸಿದ್ದಾರೆ. ಪ್ರಸ್ತುತ ದೇಶ ಹಾಗೂ ರಾಜ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಿಂದುತ್ವ ಸಂಘಟಕರು ಹಾಗೂ ಕಾರ್ಯಕರ್ತರು ಒಗ್ಗೂಡಬೇಕಾದ ಅಗತ್ಯವಿದೆ. ಇದು ಯಾವುದೇ ಸ್ಪರ್ಧಾತ್ಮಕ ನಿರ್ಧಾರವಲ್ಲ, ಬದಲಾಗಿ ಸಮಾನ ಮನಸ್ಕರು ಒಂದಾಗಿ ಕೆಲಸ ಮಾಡುವ ನಿರ್ಧಾರವಾಗಿದೆ ಎಂದರು.
ತುಳು ಭಾಷೆಗೆ 2ನೇ ಅಧಿಕೃತ ಭಾಷೆ ಮಾನ್ಯತೆ ಹಾಗೂ 8ನೇ ಪರಿಚ್ಛೇದಕ್ಕೆ ಆಗ್ರಹ
ಮಂಗಳೂರಿಗೆ ಆಗಮಿಸಿದ್ದ ವೇಳೆ ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ಮುತಾಲಿಕ್, ಇದು ತುಳುನಾಡಿನ ಜನರ ದೀರ್ಘಕಾಲದ ಬೇಡಿಕೆಯಾಗಿತ್ತು ಎಂದರು. ಮುಂದುವರಿದು, ಕರ್ನಾಟಕದ ಎಲ್ಲಾ ಸಂಸದರು (MP) ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮುಂದಿನ ಪ್ರಕ್ರಿಯೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









