ಮಂಗಳೂರು : ನಗರದ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್ ವ್ಯವಸ್ಥೆಯ ತೀವ್ರ ತರಂಗಾಂತರದಿಂದಾಗಿ ಕಳೆದ ಎರಡು ವರ್ಷಗಳಿಂದ ಸುತ್ತಮುತ್ತಲಿನ ನ್ಯಾಯಾಲಯ, ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು, ಹೋಟೆಲ್ಗಳು ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಮೊಬೈಲ್ ನೆಟ್ವರ್ಕ್ ಸಿಗದೆ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜೈಲಿನ ಭದ್ರತೆ ಹೆಸರಿನಲ್ಲಿ ಸಾರ್ವಜನಿಕ ಜೀವನಕ್ಕೆ ಅಡ್ಡಿಪಡಿಸುತ್ತಿರುವುದನ್ನು ತಕ್ಷಣವೇ ಮರುಪರಿಶೀಲಿಸಿ, ತಾಂತ್ರಿಕವಾಗಿ ಜೈಲಿನ ವ್ಯಾಪ್ತಿಗೆ ಮಾತ್ರ ಸೀಮಿತಗೊಳ್ಳುವ ವೈಜ್ಞಾನಿಕ ವ್ಯವಸ್ಥೆ ಅಳವಡಿಸಬೇಕು ಎಂದು ಮಂಗಳೂರು ವಕೀಲರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ನ್ಯಾಯಾಲಯದ ತುರ್ತು ಕಲಾಪಗಳು, ವಕೀಲರು ಹಾಗೂ ಕಕ್ಷಿದಾರರ ನಡುವಿನ ಮಾಹಿತಿ ವಿನಿಮಯ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಜಾಮರ್ ಸಮಸ್ಯೆಯಿಂದಾಗಿ ನಿರಂತರ ತೊಂದರೆಯಾಗುತ್ತಿದ್ದು, ಅಭಿವೃದ್ಧಿಯತ್ತ ಸಾಗುತ್ತಿರುವ ನಗರಕ್ಕೆ ಇದು ಹಿನ್ನಡೆಯಾಗಿದೆ. ಇತ್ತೀಚೆಗೆ ಜೈಲಿನಲ್ಲಿ 10 ಮೊಬೈಲ್ ಫೋನ್ಗಳು ಪತ್ತೆಯಾಗಿರುವುದು ಒಳಗಿನ ಭದ್ರತಾ ವೈಫಲ್ಯವನ್ನು ಎತ್ತಿಹಿಡಿಯುತ್ತದೆಯೇ ವಿನಃ, ನಗರದಾದ್ಯಂತ ನೆಟ್ವರ್ಕ್ ಸ್ಥಗಿತಗೊಳಿಸುವುದು ಸೂಕ್ತ ಪರಿಹಾರವಲ್ಲ ಎಂದು ಮಂಗಳೂರು ಬಾರ್ ಕೌನ್ಸಿಲ್ ಅಧ್ಯಕ್ಷ ಜಗದೀಶ್ ಕೆ. ಶೇಣವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಸೆಪ್ಟೆಂಬರ್ 14ರೊಳಗೆ ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸದಿದ್ದರೆ, ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









