ಮಂಗಳೂರು : ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಯಲ್ಲಿ ಇತ್ತೀಚೆಗೆ ಜರುಗಿದ ಭೀಕರ ಸ್ಫೋಟದ ಘಟನೆಯನ್ನು ಬರಿ ಪರಿಹಾರ ಹಣ ಹಾಗೂ ಉದ್ಯೋಗದ ಭರವಸೆಗೆಷ್ಟೇ ಸೀಮಿತಗೊಳಿಸದೆ, ಅಲ್ಲಿ ಉಂಟಾಗಿರುವ ಸುರಕ್ಷತಾ ಲೋಪಗಳ ಕುರಿತು ಸಮಗ್ರ ಮಟ್ಟದ ತನಿಖೆ ಕೈಗೊಳ್ಳಬೇಕು ಎಂದು ಎಂಆರ್ಪಿಎಲ್ ಮಜ್ದೂರ್ ಸಂಘದ ಗೌರವಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅವರು ಶರತ್ತು ವಿಧಿಸಿದ್ದಾರೆ.
ಮಂಗಳೂರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಂಆರ್ಪಿಎಲ್ನಂತಹ ಬೃಹತ್ ಸಂಸ್ಕರಣಾ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಮತ್ತು ಸುತ್ತಮುತ್ತಲ ಸಾರ್ವಜನಿಕರ ಜೀವ ರಕ್ಷಣೆ ಪ್ರಥಮ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಇಡೀ ಅವಘಡದ ಹಿಂದೆ ಇರುವ ಕಾರಣಗಳನ್ನು ಪತ್ತೆಹಚ್ಚಿ, ಇಂತಹ ದುರಂತಗಳು ಮತ್ತೆ ಸಂಭವಿಸದಂತೆ ಶಾಶ್ವತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದರು.
ದುರಂತದಲ್ಲಿ ಜೀವ ಕಳೆದುಕೊಂಡ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ 1.20 ಕೋಟಿ ರೂಪಾಯಿ ಪರಿಹಾರ ಘೋಷಿಸಿರುವುದನ್ನು ಸ್ವಾಗತಿಸಿದ ಅವರು, ಮೃತರ ಕುಟುಂಬದ ನೆರವಿಗೆ ಧಾವಿಸಿ ಸೂಕ್ತ ಉದ್ಯೋಗ ಅವಕಾಶ ಒದಗಿಸಬೇಕು ಎಂದು ಆಡಳಿತ ಮಂಡಳಿಯನ್ನು ಆಗ್ರಹಿಸಿದರು.
ಇದೇ ವೇಳೆ ಎಂಆರ್ಪಿಎಲ್ನಲ್ಲಿ ದುಡಿಯುವ ಗುತ್ತಿಗೆ ನೌಕರರು ಹಾಗೂ ಅವರ ಕುಟುಂಬದ ಭದ್ರತೆಗಾಗಿ ಕನಿಷ್ಠ 10 ಲಕ್ಷ ರೂಪಾಯಿ ಆರೋಗ್ಯ ವಿಮೆ ಹಾಗೂ ದುರದೃಷ್ಟವಶಾತ್ ಸಾವು ಸಂಭವಿಸಿದರೆ 25 ಲಕ್ಷ ರೂಪಾಯಿ ಅಪಘಾತ ವಿಮೆ ಕಲ್ಪಿಸಬೇಕು. ಅಲ್ಲದೆ, ಅನಾರೋಗ್ಯದ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗುವ ಬಡ ಕಾರ್ಮಿಕರನ್ನು ಉದ್ಯೋಗದಿಂದ ವಜಾಗೊಳಿಸುತ್ತಿರುವ ಗಂಭೀರ ಆರೋಪಗಳಿದ್ದು, ಈ ಬಗ್ಗೆಯೂ ಸೂಕ್ತ ವಿಚಾರಣೆ ನಡೆಯಬೇಕಿದೆ ಎಂದು ಹೇಳಿದರು.
ಅನಿಲ ಸೋರಿಕೆಯಂತಹ ಪ್ರಾಣಾಪಾಯಕಾರಿ ಸನ್ನಿವೇಶಗಳನ್ನು ತಕ್ಷಣವೇ ಪತ್ತೆಹಚ್ಚುವ ಸುಧಾರಿತ ಡಿಟೆಕ್ಷನ್ ತಂತ್ರಜ್ಞಾನ, ತುರ್ತು ಎಚ್ಚರಿಕೆ ಸೈರನ್ ಹಾಗೂ ಸುರಕ್ಷಿತ ಸ್ಥಳಾಂತರ ವ್ಯವಸ್ಥೆಗಳನ್ನು ಬಲಪಡಿಸಬೇಕು. ಭದ್ರತಾ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಬಾರದು ಎಂದು ಎಚ್ಚರಿಸಿದರು.
ಈ ಘಟನೆಯನ್ನು ಕೇವಲ ಕಾರ್ಮಿಕರ ಸಮಸ್ಯೆಯಾಗಿ ನೋಡದೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಹಿತಾಸಕ್ತಿಯ ಗಂಭೀರ ವಿಚಾರವನ್ನಾಗಿ ಪರಿಗಣಿಸಲಾಗುವುದು. ಮುಂಬರುವ ದಿನಗಳಲ್ಲಿ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಸತ್ಯಜಿತ್ ಸುರತ್ಕಲ್ ಸ್ಪಷ್ಟಪಡಿಸಿದರು.
ಸದರಿ ಮಾಧ್ಯಮ ಗೋಷ್ಠಿಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿಯ ಸಂಚಾಲಕರಾದ ಶಶಿರಾಜ್ ಶೆಟ್ಟಿ ಕೊಳಂಬೆ, ಕೆಪಿಟಿಎಂಎಸ್ ಜಿಲ್ಲಾಧ್ಯಕ್ಷ ಯಶ್ಪಾಲ್ ಸುವರ್ಣ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ತುಷಾರ್ ಕದ್ರಿ, ತುಳುನಾಡು ರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಹಾಗೂ ಪ್ರಮುಖರಾದ ಅಮರ್ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









