ಪುತ್ತೂರು : ಮಂತ್ರಾಲಯಕ್ಕೆ ದೇವದರ್ಶನಕ್ಕಾಗಿ ತೆರಳುತ್ತಿದ್ದ ಪ್ರಯಾಣಿಕರ ಕಾರಿಗೆ ಎದುರಿನಿಂದ ಬಂದ ಮತ್ತೊಂದು ಕಾರು ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಶಿಶಿಲ ಗ್ರಾಮದ ಮಂತಾಜೆ ಮೂಲದ ಯುವಕ ದೀಪೇಶ್ (27) ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ.
ಸೆಪ್ಟೆಂಬರ್ 29ರಂದು ನಸುಕಿನ ಜಾವ 3.40ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 73ರ ಸಬ್ಬೇನಹಳ್ಳಿ ಬಳಿ ಈ ಅಪಘಾತ ಸಂಭವಿಸಿತ್ತು. ಶಿಶಿಲ ಗ್ರಾಪಂ ಮಾಜಿ ಅಧ್ಯಕ್ಷ ಸುಧೀನ್, ರಘು, ಸತೀಶ, ದೀಪೇಶ್, ದೀಪಕ್ ಹಾಗೂ ಶೋಭಿತ್ ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಮೂಡಿಗೆರೆ ಕಡೆಯಿಂದ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಕುತ್ತಿಗೆಯ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿದ್ದ ದೀಪೇಶ್ ಹಾಗೂ ಭುಜಕ್ಕೆ ಪೆಟ್ಟಾಗಿದ್ದ ಸುಧೀನ್ ಅವರನ್ನು ಉಜಿರೆಯ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೀಪೇಶ್ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅವರು ಜೀವನ್ಮರಣ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದೇ ವೇಳೆ ಅಪಘಾತ ಎಸಗಿದ ಕಾರಿನ ಚಾಲಕ ಮದ್ಯಪಾನ ಮಾಡಿದ್ದ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರೂ, ಎಫ್ಐಆರ್ನಲ್ಲಿ ಆ ಅಂಶವನ್ನು ಸೇರಿಸದೆ ಪ್ರಕರಣವನ್ನು ದಾರಿ ತಪ್ಪಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಗಾಯಾಳುಗಳು ಮತ್ತು ಮೃತರ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









