ಮಂಗಳೂರು : ದೇಶದ ಜನರ ವಿಶ್ವಾಸ ಕಳೆದುಕೊಂಡು ಹತಾಶ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರು ಬಳಸುತ್ತಿರುವ ಅಪಸಾಫ್ಟ್ ಭಾಷೆಯಲ್ಲೇ ಅವರ ನಿರಾಸೆ ಎದ್ದು ಕಾಣುತ್ತಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನೀಡಿರುವ ಹೇಳಿಕೆ ಅವರ ಸ್ವಂತ ವ್ಯಕ್ತಿತ್ವವನ್ನು ತೋರಿಸುತ್ತದೆಯೇ ಹೊರತು, ಪ್ರಧಾನಿಯವರ ಘನತೆಗೆ ಯಾವುದೇ ಕುಂದು ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ಭಾಷಣದ ವೇಳೆ ತಾಳ್ಮೆ ಕಳೆದುಕೊಂಡು ಪ್ರಧಾನಿಯವರ ತಂದೆಯವರ ಕುರಿತು ಅಪಹಾಸ್ಯಕಾರಿ ಹಾಗೂ ನಿಂದನಾತ್ಮಕ ಮಾತುಗಳನ್ನಾಡಿರುವುದು ತೀರಾ ಅಸಮ್ಮತಾರ್ಹ ಎಂದು ಶಾಸಕರು ತೀವ್ರವಾಗಿ ಖಂಡಿಸಿದ್ದಾರೆ. ರಾಜಕೀಯವಾಗಿ ದೀರ್ಘ ಅನುಭವ ಹೊಂದಿರುವ ಖರ್ಗೆಯಂತಹ ಹಿರಿಯ ನಾಯಕರು ತಮ್ಮ ಪದವಿಯ ಜವಾಬ್ದಾರಿಯನ್ನು ಅರಿತು ಮಾತನಾಡಬೇಕು. ಇಂತಹ ಕೀಳುಮಟ್ಟದ ಹೇಳಿಕೆಗಳ ಮೂಲಕ ಸಾರ್ವಜನಿಕವಾಗಿ ತಮ್ಮ ಘನತೆಯನ್ನು ತಾವೇ ಕಡಿಮೆ ಮಾಡಿಕೊಳ್ಳಬಾರದು ಎಂದು ಕಾಮತ್ ಕಿವಿಮಾತು ಹೇಳಿದರು.
ದೇಶ ಮತ್ತು ದೇಶವಾಸಿಗಳ ಸೇವೆಗಾಗಿ ನಿರಂತರ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಜನರ ಆಶೀರ್ವಾದ ಹಾಗೂ ಪ್ರೀತಿಯೇ ಬಹುದೊಡ್ಡ ಶ್ರೀರಕ್ಷೆಯಾಗಿದೆ. ಕಾಂಗ್ರೆಸ್ ನಾಯಕರ ಇಂತಹ ಕ್ಷುಲ್ಲಕ ಹಾಗೂ ಬಾಯಿಚಪಲದ ಹೇಳಿಕೆಗಳಿಗೆ ಭಾರತದ ಜನತೆ ಈಗಾಗಲೇ ಸೂಕ್ತ ಉತ್ತರ ನೀಡುತ್ತಿದ್ದು, ಮುಂದೆಯೂ ನೀಡಲಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









