ಮಂಗಳೂರು : ಮಂಗಳೂರು ನಗರದ ಪ್ರಮುಖ ರಸ್ತೆ ಸಂಪರ್ಕ ಜಾಲವಾದ ಕರಾವಳಿ ಸರ್ಕಲ್ನಿಂದ ಪಂಪ್ವೆಲ್ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಲೋಕೋಪಯೋಗಿ ಇಲಾಖೆಯಿಂದ ಸುಮಾರು ರೂ. 4 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಈ ಯೋಜನೆಯಡಿ ರಸ್ತೆಯ ಎರಡೂ ಬದಿಗಳ ಕಾಂಕ್ರೀಟೀಕರಣ ಕಾರ್ಯಗಳು ಮುಕ್ತಾಯಗೊಂಡಿವೆ. ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ಅವರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ನಿರ್ಮಾಣದ ಗುಣಮಟ್ಟವನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದರು.
ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಶಾಸಕರು, ಈ ಭಾಗದಲ್ಲಿ ಇನ್ನು ಬಾಕಿ ಉಳಿದಿರುವ ಮೂಲಸೌಕರ್ಯ ಅಗತ್ಯಗಳಾದ ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಇಂಟರ್ಲಾಕ್ ಅಳವಡಿಕೆಯನ್ನು ಸುಮಾರು ರೂ. 40 ಲಕ್ಷ ವೆಚ್ಚದಲ್ಲಿ ತಕ್ಷಣವೇ ಆರಂಭಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು. ಭವಿಷ್ಯದಲ್ಲಿ ಭೂಗತ ಚರಂಡಿ (ಯುಜಿಡಿ) ಕಾಮಗಾರಿಗಳ ನಿರ್ವಹಣೆಗೂ ಸುಲಭವಾಗುವ ರೀತಿಯಲ್ಲಿ ವೈಜ್ಞಾನಿಕವಾಗಿ ಈ ರಸ್ತೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ಬಲ್ಮಠದಿಂದ ಕಂಕನಾಡಿ ಕರಾವಳಿ ಸರ್ಕಲ್ವರೆಗಿನ ರಸ್ತೆ ಅಭಿವೃದ್ಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಅವರು, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಸುಮಾರು ರೂ. 1.21 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಭಾಗದ ರಸ್ತೆ ನಿರ್ಮಾಣ ಕಾರ್ಯವೂ ಸಹ ಅಧಿಕೃತವಾಗಿ ಆರಂಭವಾಗಲಿದೆ ಎಂದರು.
ಮಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಗರದ 60 ವಾರ್ಡ್ಗಳ ಮೂಲಸೌಕರ್ಯ ಅಭಿವೃದ್ಧಿಗೆ ರೂ. 400 ಕೋಟಿ ಬೃಹತ್ ಅನುದಾನವನ್ನು ಕಾಯ್ದಿರಿಸಲಾಗಿದೆ. ಈ ಅನುದಾನದ ಮೂಲಕ ಪ್ರಮುಖ ರಸ್ತೆಗಳು, ವಾರ್ಡ್ಗಳ ಒಳರಸ್ತೆಗಳು, ಚರಂಡಿ, ಒಳಚರಂಡಿ, ಕುಡಿಯುವ ನೀರು ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮಳೆ ಕಡಿಮೆಯಾಗಿರುವುದರಿಂದ ನಗರಾದ್ಯಂತ ಬಾಕಿ ಇರುವ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನಗರದ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸಿ ಸಹಕರಿಸಿದ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ. ಶಿವಕುಮಾರ್ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕ ಐವನ್ ಡಿʼಸೋಜಾ ಕೃತಜ್ಞತೆ ಸಲ್ಲಿಸಿದರು.
ಈ ಪರಿಶೀಲನಾ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹೇಮಂತ್, ಮಹಾನಗರ ಪಾಲಿಕೆಯ ಜೂನಿಯರ್ ಎಂಜಿನಿಯರ್ ಮಂಜುನಾಥ್, ಮಾಜಿ ಕಾರ್ಪೊರೇಟರ್ಗಳಾದ ನವೀನ್ ಡಿ’ಸೋಜಾ, ಅಪ್ಪಿ ಎಸ್, ಶೈಲಜಾ, ನಾಗೇಂದ್ರ ಕುಮಾರ್, ಸತೀಶ್ ಪೆಂಗಲ್, ಭಾಸ್ಕರ್ ರಾವ್, ಕಾಂಗ್ರೆಸ್ ನಾಯಕರಾದ ಮನು ರಾಜ್, ಎನ್.ಪಿ., ಚಂದ್ರಹಾಸ್ ಪೂಜಾರಿ ಕೋಡಿಕಲ್, ಇಮ್ರಾನ್ ಎ.ಆರ್, ನೀತು ಡಿ’ಸೋಜಾ, ಹರ್ಬಟ್ ಡಿ’ಸೋಜಾ, ಮನೀಶ್ ಬೋಳಾರ್, ಜೇಮ್ಸ್ ಪ್ರವೀಣ್, ಉಪೇಂದ್ರ, ಅನಿಲ್ ಕುತ್ಕೋರಿಗುಡ್ಡೆ, ಶ್ರೀಧರ್ ಜಪ್ಪಿನಮೊಗೇರು, ನವಾಜ್ ಜೆಪ್ಪು, ವಿಲ್ಫಿ ಹಾಗೂ ಯುವ ಕಾಂಗ್ರೆಸ್ ನಾಯಕ ಬಶೀರ್ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









