ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ನವೆಂಬರ್ 24, 2026ರಂದು ಆಯೋಜಿಸಲು ಉದ್ದೇಶಿಸಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆತರುವ ಹಾಗೂ ಊಟೋಪಚಾರದ ವೆಚ್ಚಕ್ಕಾಗಿ ಆಯಾ ಗ್ರಾಮ ಪಂಚಾಯತ್ಗಳ ಸ್ವಂತ ನಿಧಿಯಿಂದ ತಲಾ 25,000 ರೂಪಾಯಿ ಭರಿಸುವಂತೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನೀಡಿರುವ ನಿರ್ದೇಶನವನ್ನು ಕಾರ್ಕಳ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಗ್ರಾಮ ಪಂಚಾಯತ್ಗಳ ಸ್ವಂತ ನಿಧಿಯನ್ನು ಆಯಾ ಗ್ರಾಮಗಳ ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾರ್ವಜನಿಕರ ಮೂಲಭೂತ ಅಗತ್ಯಗಳನ್ನು ಪೂರೈಸಲು ಆದ್ಯತೆಯ ಮೇರೆಗೆ ವಿನಿಯೋಗಿಸಬೇಕಾಗುತ್ತದೆ. ಪ್ರಸ್ತುತ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಅಭಾವ ಸೇರಿದಂತೆ ಗ್ರಾಮೀಣ ಭಾಗದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪಂಚಾಯತ್ಗಳು ಅನುದಾನವನ್ನು ಕಾಯ್ದಿರಿಸುವುದು ಅತ್ಯಗತ್ಯವಾಗಿದೆ ಎಂದು ಒಕ್ಕೂಟ ಪ್ರತಿಪಾದಿಸಿದೆ.
ಈಗಾಗಲೇ ಅನುದಾನದ ಕೊರತೆಯಿಂದಾಗಿ ಹಲವು ಗ್ರಾಮ ಪಂಚಾಯತ್ಗಳಲ್ಲಿ ಕಚೇರಿಯ ವಿದ್ಯುತ್ ಬಿಲ್ ಹಾಗೂ ಸಿಬ್ಬಂದಿಗಳ ವೇತನ ಪಾವತಿಯಂತಹ ದೈನಂದಿನ ಆಡಳಿತ ನಿರ್ವಹಣೆಗೂ ತೀವ್ರ ತೊಂದರೆಯಾಗುತ್ತಿದೆ. ಕುಡಿಯುವ ನೀರಿನ ನಿರ್ವಹಣೆ, ಪೈಪ್ಲೈನ್ ದುರಸ್ತಿ, ಬೀದಿ ದೀಪ ಹಾಗೂ ರಸ್ತೆ-ಚರಂಡಿಗಳ ನಿರ್ವಹಣೆಯಂತಹ ತುರ್ತು ಕೆಲಸಗಳನ್ನು ಪೂರೈಸಲು ಪಂಚಾಯತ್ಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿವೆ. ಅಲ್ಲದೆ, ಗ್ರಾಮ ಪಂಚಾಯತ್ ಚುನಾವಣೆಗಳು ಸಕಾಲದಲ್ಲಿ ನಡೆಯದೆ ಚುನಾಯಿತ ಜನಪ್ರತಿನಿಧಿಗಳು ಇಲ್ಲದ ಕಾರಣ 15ನೇ ಹಣಕಾಸು ಆಯೋಗದ ಅನುದಾನವೂ ಬಿಡುಗಡೆಯಾಗದೆ ಬಾಕಿ ಉಳಿದಿದೆ ಎಂದು ಒಕ್ಕೂಟ ಪರಿಸ್ಥಿತಿಯನ್ನು ವಿವರಿಸಿದೆ.
ಜಿಲ್ಲೆಯಲ್ಲಿ ನಡೆಯುವ ಗ್ಯಾರಂಟಿ ಸಮಾವೇಶಕ್ಕೆ ತಮ್ಮ ಒಕ್ಕೂಟದ ಯಾವುದೇ ವಿರೋಧವಿಲ್ಲ, ಆದರೆ ಪಂಚಾಯತ್ಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಇಂತಹ ಸಂದರ್ಭದಲ್ಲಿ ಸಮಾವೇಶದ ವೆಚ್ಚಕ್ಕಾಗಿ ಗ್ರಾಮ ಪಂಚಾಯತ್ ಸ್ವಂತ ನಿಧಿಯನ್ನು ಬಳಸುವುದಕ್ಕೆ ತಮ್ಮ ಸ್ಪಷ್ಟ ವಿರೋಧವಿದೆ. ಸರ್ಕಾರದ ಇತರ ಅನುದಾನಗಳನ್ನು ಬಳಸಿಕೊಂಡು ಸಮಾವೇಶವನ್ನು ನಡೆಸಲಿ. ಆದ್ದರಿಂದ ಗ್ರಾಮ ಪಂಚಾಯತ್ ಸ್ವಂತ ನಿಧಿ ಬಳಕೆ ಕುರಿತು ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಅವರು ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಕಾರ್ಕಳ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಎಳ್ಳಾರೆ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









