ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಪ್ಲಾಜಾ ಸಮೀಪ ಗೋವಾದಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬೃಹತ್ ಪ್ರಮಾಣದ ಮದ್ಯದ ಜಾಲವನ್ನು ಪಡುಬಿದ್ರಿ ಪೊಲೀಸರು ಬುಧವಾರ ಭೇದಿಸಿದ್ದಾರೆ. ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರಿಗೆ ಸಿಕ್ಕ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪೊಲೀಸ್ ತಂಡವು, ಮದ್ಯ ತುಂಬಿದ್ದ ಪಿಕ್ಅಪ್ ವಾಹನ ಹಾಗೂ ಅದಕ್ಕೆ ರಕ್ಷಣೆ ನೀಡುತ್ತಾ ಬಂದಿದ್ದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡು ನಾಲ್ವರನ್ನು ಹೆಡೆಮುರಿ ಕಟ್ಟಿದೆ. ಬಂಧಿತರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ವಿನಯ್ (47), ಗಜಾನನ ಮಹಾಬಲೇಶ್ವರ ನಾಯ್ಕ್ (45), ಸುಜಿತ್ ತಾಳೇಕರ (25) ಮತ್ತು ಲಾರೆನ್ಸ್ ಥಾಮಸ್ ಮೆಂಡೋನ್ಸಾ (49) ಎಂದು ಗುರುತಿಸಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪೊಲೀಸರು 14.35 ಲಕ್ಷ ರೂಪಾಯಿ ಮೌಲ್ಯದ 2,583 ಲೀಟರ್ ಅಕ್ರಮ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಮದ್ಯ ಸಾಗಿಸಲು ಬಳಸಿದ್ದ 5 ಲಕ್ಷ ರೂ. ಮೌಲ್ಯದ ಮಹೀಂದ್ರಾ ಪಿಕ್ಅಪ್ ಹಾಗೂ 3 ಲಕ್ಷ ರೂ. ಮೌಲ್ಯದ ಮಾರುತಿ ಸ್ವಿಫ್ಟ್ ಕಾರು ಸೇರಿದಂತೆ ಒಟ್ಟು 22.35 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ಪಡುಬಿದ್ರಿ ಠಾಣೆಯ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳ ಪೈಕಿ ವಿನಯ್ ಎಂಬಾತನ ವಿರುದ್ಧ ಈಗಾಗಲೇ ಕಾರವಾರ ಗ್ರಾಮಾಂತರ, ಚಿತ್ತಾಕುಲ ಹಾಗೂ ಉತ್ತರ ಕನ್ನಡದ ಅಬಕಾರಿ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ಪ್ರಕರಣ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬ್ಕಾರಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಅಡಿಯಲ್ಲಿ ಅಪರಾಧ ಸಂಖ್ಯೆ 138/2026 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ಕಳ ಉಪವಿಭಾಗದ ಎಎಸ್ಪಿ ಇಶಿತಾ ಗುಪ್ತಾ, ಐಪಿಎಸ್ ಅವರ ಮಾರ್ಗದರ್ಶನ ಹಾಗೂ ಕಾಪು ಸಿಐ ಅಜ್ಮತ್ ಅಲಿ ಜಿ. ಅವರ ನೇತೃತ್ವದಲ್ಲಿ ನಡೆದ ಈ ಮೆಗಾ ಕಾರ್ಯಾಚರಣೆಯಲ್ಲಿ ಪಡುಬಿದ್ರಿ ಎಸ್ಐಗಳಾದ ಶಕ್ತಿವೇಲು ಇ., ಅನಿಲ್ ಕುಮಾರ್ ಟಿ. ನಾಯ್ಕ್, ಸಿಬ್ಬಂದಿಗಳಾದ ರಾಜೇಶ್, ಗಿರೀಶ್, ಕೃಷ್ಣಪ್ರಸಾದ್, ಜೀವನ್, ಸತೀಶ್, ಶಿವಾನಂದ ಸೇರಿದಂತೆ ಠಾಣೆಯ ಇಡೀ ಅಪರಾಧ ಪತ್ತೆ ದಳ ಪಾಲ್ಗೊಂಡಿತ್ತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









