ಸುಳ್ಯ : ಸಾಂಸ್ಕೃತಿಕ ಲೋಕದ ಹಿರಿಯ ಕೊಂಡಿ, ಯಕ್ಷಗಾನ ಕಲಾವಿದ ಮತ್ತು ರಂಗಕರ್ಮಿ ಸುಜನಾ ಸುಳ್ಯ (ಎಸ್.ಎನ್. ಜಯರಾಮ್ ನಾವೂರು) ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ನಿಶ್ಶಕ್ತಿಯಿಂದ ಬಳಲುತ್ತಿದ್ದ ಅವರು, ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಸುಳ್ಯದ ಪ್ರಸಿದ್ಧ ನಾವೂರು ಮನೆತನದವರಾಗಿದ್ದು, ಖ್ಯಾತ ರಂಗಕರ್ಮಿ ಜೀವನ್ರಾಮ್ ಸುಳ್ಯ ಅವರ ತಂದೆಯಾಗಿದ್ದಾರೆ.
ಸುಜನಾ ಸುಳ್ಯ ಅವರ ಕಲಾ ಪಯಣವು ನಾಟಕ ನಟರಾಗಿ ಆರಂಭಗೊಂಡು, ಮಾವ ಕಾವು ಶ್ರೀನಿವಾಸ ರಾಯರ ಪ್ರೇರಣೆಯೊಂದಿಗೆ ಯಕ್ಷಗಾನ ರಂಗಕ್ಕೆ ತಿರುಗಿತು. ಸುಮಾರು 36 ವರ್ಷಗಳ ಕಾಲ ಯಕ್ಷಗಾನಕ್ಕೆ ತಮ್ಮನ್ನು ಮುಡಿಪಾಗಿಟ್ಟ ಇವರು, ಬಳ್ಳಂಬೆಟ್ಟು, ಧರ್ಮಸ್ಥಳ, ಕಟೀಲು ಸೇರಿದಂತೆ ತೆಂಕುತಿಟ್ಟಿನ ಪ್ರಮುಖ ಮೇಳಗಳಲ್ಲಿ ಸೇವೆ ಸಲ್ಲಿಸಿದರು. ಇವರು ತೆಂಕುತಿಟ್ಟಿನ ಶ್ರೇಷ್ಠ ಹಾಸ್ಯ ಪಾತ್ರಗಳಲ್ಲಿ ವಿಶೇಷ ಸಿದ್ಧಿ ಮತ್ತು ಪ್ರಸಿದ್ಧಿಯನ್ನು ಗಳಿಸಿದ್ದರು. ಹಾಸ್ಯದ ಜೊತೆಗೆ ಎಲ್ಲಾ ರೀತಿಯ ಸ್ತ್ರೀ-ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು.
ಸುಜನಾ ಸುಳ್ಯ ಅವರು ಕೇವಲ ಮುಮ್ಮೇಳಕ್ಕೆ ಸೀಮಿತರಾಗದೆ, ಯಕ್ಷಗಾನದ ಸರ್ವಾಂಗವನ್ನೂ ಬಲ್ಲವರಾಗಿದ್ದರು. ಹಿಮ್ಮೇಳದ ಎಲ್ಲಾ ವಿಭಾಗಗಳು, ತಾಳಮದ್ದಳೆಯಲ್ಲಿ ಅರ್ಥಧಾರಿಕೆ, ಹಾಗೂ ಪ್ರಸಾಧನ ತಜ್ಞರಾಗಿಯೂ ಸೇವೆ ಸಲ್ಲಿಸಿದ್ದರು. ಸುಳ್ಯ ತಾಲೂಕಿನಲ್ಲಿ ಯುವ ಪೀಳಿಗೆಗೆ ಯಕ್ಷಗಾನ ಕಲೆಯನ್ನು ಪಸರಿಸಲು ‘ವಿದೇಯದೇವಿ ನಾಟ್ಯಕಲಾ ಸಂಘ’ ಸ್ಥಾಪಿಸಿದರು. ಅಲ್ಲದೆ, ‘ರಂಗಮನೆ’ಯ ‘ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ’ದ ಮೂಲಕ ಹಲವು ಯುವ ಕಲಾವಿದರಿಗೆ ಗುರುವಾಗಿ ಮಾರ್ಗದರ್ಶನ ನೀಡಿದರು. ಇವರ ಅಪೂರ್ವ ಕಲಾ ಸೇವೆಗೆ ಗೌರವಾರ್ಥವಾಗಿ 2008 ರಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









