ಮಂಗಳೂರು : ಪ್ರಸಿದ್ಧ ಯಕ್ಷಗಾನ ಛಂದಸ್ಸುಕಾರ ಮತ್ತು ಬಹುಮುಖ ಪ್ರತಿಭೆಯ ಕಲಾವಿದ ಗಣೇಶ್ ಕೊಲೆಕಾಡಿ ಅವರು ದೀರ್ಘಕಾಲದ ಅಸೌಖ್ಯದಿಂದ ನವೆಂಬರ್ 7 ರಂದು ನಿಧನರಾಗಿದ್ದಾರೆ. 53 ವರ್ಷದ ಗಣೇಶ್ ಕೊಲೆಕಾಡಿ ಅವರು ಮೂಲ್ಕಿಯ ಅತಿಕಾರಿಬೆಟ್ಟು ಗ್ರಾಮದಲ್ಲಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಕೃಷ್ಣಪ್ಪ ಪೂಜಾರಿ ಮತ್ತು ಪದ್ಮಾವತಿ ಅವರ ಏಕೈಕ ಪುತ್ರರಾಗಿದ್ದ ಇವರು, ಪ್ರಸಿದ್ಧ ಛಂದಸ್ಸುಕಾರರಾಗಿದ್ದ ದಿವಂಗತ ನಾರಾಯಣ ಶೆಟ್ಟಿ ಅವರ ಬಳಿ ವಿಶೇಷ ತರಬೇತಿ ಪಡೆದು ಅವರ ಶ್ರೇಷ್ಠ ಶಿಷ್ಯರಾಗಿ ನಾಡಿನಾದ್ಯಂತ ಖ್ಯಾತಿ ಗಳಿಸಿದ್ದರು.
ಯಕ್ಷಗಾನ ಸಾಹಿತ್ಯ ಲೋಕಕ್ಕೆ ಗಣೇಶ್ ಕೊಲೆಕಾಡಿ ಅವರ ಕೊಡುಗೆ ಅಪಾರ. ಇವರು ಸುಮಾರು 60 ಪ್ರಸಂಗಗಳನ್ನು ರಚಿಸಿದ್ದಾರೆ. ರಂಗದಲ್ಲಿ ಯಶಸ್ವಿ ಪ್ರಯೋಗ ಕಂಡ ಅವರ ಪ್ರಸಂಗಗಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಉದಾಹರಣೆಗೆ, ಅವರ ‘ಶ್ರೀಧಾಮ’ ಪ್ರಸಂಗವು ಕಟೀಲು ಮತ್ತು ಎಡನೀರು ಮೇಳಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಹಾಗೆಯೇ, ‘ಸಮರ ಸೌಗಂಧಿಕೆ’ ಪ್ರಸಂಗವು ಉಭಯ ತಿಟ್ಟುಗಳಲ್ಲಿ ನೂರಾರು ಪ್ರದರ್ಶನಗಳನ್ನು ಪೂರೈಸಿದೆ. ‘ರಾಜಕಾಕತೀಯ’ ಮತ್ತು ‘ನಾಗವೃಜ ಕ್ಷೇತ್ರ ಮಹಾತ್ಮೆ’ ಪ್ರಸಂಗಗಳು ಪಾವಂಜೆ ಮೇಳದಿಂದ ಪ್ರದರ್ಶನಗೊಂಡು ಕೀರ್ತಿ ಗಳಿಸಿವೆ.
ಕೊಲೆಕಾಡಿ ಅವರ ಬಹುಮುಖ ಪ್ರತಿಭೆ ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರಲಿಲ್ಲ. ಅವರು ತಾಳಮದ್ದಳೆ ಅರ್ಥಧಾರಿಯಾಗಿ ಕರ್ನಾಟಕ ಮಾತ್ರವಲ್ಲದೆ ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದರು. ಅಲ್ಲದೇ, ಸುಮಾರು 10 ವರ್ಷಗಳ ಕಾಲ ನೂರಾರು ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿ ಉಚಿತವಾಗಿ ಯಕ್ಷಗಾನ ಶಿಕ್ಷಣ ನೀಡುವ ಮೂಲಕ ಗುರುಗಳಾಗಿ ಯಕ್ಷಗಾನದ ಬೆಳವಣಿಗೆಗೆ ಶ್ರಮಿಸಿದ್ದರು. ಅವರ ‘ಯಕ್ಷಗಾನ ಛಂದಃಪ್ರಪಂಚ -ಒಂದು ಆನ್ವಯಿಕ ಅಧ್ಯಯನ’ ಮತ್ತು ‘ಛಂದೋವೇದ’ (ಅಪ್ರಕಟಿತ) ಅವರ ಸಂಶೋಧನಾತ್ಮಕ ಪ್ರೌಢಿಮೆಯನ್ನು ಎತ್ತಿ ಹಿಡಿಯುತ್ತವೆ.
ಯಕ್ಷಗಾನ ಕ್ಷೇತ್ರದಲ್ಲಿನ ಅವರ ಸಾಧನೆಗೆ ಮೆಚ್ಚುಗೆಯಾಗಿ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ, ಮುದ್ದಣ ಪುರಸ್ಕಾರ, ಶೇಣಿ ಪ್ರಶಸ್ತಿ, ತಲ್ಲೂರು ಕನಕ ಅಣ್ಣಯ್ಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಸಂದಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









