ಬೆಳ್ತಂಗಡಿ : ಸೌಜನ್ಯ ಪ್ರಕರಣದ ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿ, ಬೆಳ್ತಂಗಡಿ ತಹಶೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಬಂದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಇತರ ಸೌಜನ್ಯಾ ಪರ ಹೋರಾಟಗಾರರು ಹಾಗೂ ಪೊಲೀಸರ ನಡುವೆ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ತೀವ್ರ ವಾಗ್ವಾದ ನಡೆದು ಹೈಡ್ರಾಮಾವೇ ಸೃಷ್ಟಿಯಾಯಿತು.
ಸೋಮವಾರ ಬೆಳಿಗ್ಗೆ 10.30ಕ್ಕೆ ಸೌಜನ್ಯಾ ಅವರ ತಾಯಿ ಕುಸುಮಾವತಿ ಮತ್ತು ಮಹಿಳಾ ಹೋರಾಟಗಾರ್ತಿ ಪ್ರಸನ್ನ ರವಿ ಅವರ ನೇತೃತ್ವದಲ್ಲಿ ಈ ಮನವಿ ಸಲ್ಲಿಕೆಗೆ ಸಿದ್ಧತೆ ಮಾಡಲಾಗಿತ್ತು. ಸೌಜನ್ಯಾ ಪರ ಹೋರಾಟಗಾರರು ತಾಲೂಕು ಕಚೇರಿ ಮುಂಭಾಗದಲ್ಲಿ ಒಟ್ಟುಗೂಡಿದರು. ಆದರೆ, ಬೆಳ್ತಂಗಡಿ ಠಾಣೆ ಪೊಲೀಸರು ಮನವಿ ನೀಡಲು ಅವಕಾಶ ನೀಡುವುದಿಲ್ಲ. ಇಲ್ಲಿ ಜನರನ್ನು ಸೇರಿಸುವುದು ನಿಯಮದ ಉಲ್ಲಂಘನೆ ಎಂದು ಹೇಳಿ ಅವರನ್ನು ವಶಕ್ಕೆ ಪಡೆಯಲು ಮುಂದಾದರು.
ಈ ಸಂದರ್ಭದಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಪ್ರಸನ್ನ ರವಿ, “ನಾವು ಪ್ರತಿಭಟನೆ ನಡೆಸಲು ಬಂದಿಲ್ಲ, ಕೇವಲ ತಹಸೀಲ್ದಾರ್ಗೆ ಮನವಿ ಕೊಡುವುದಕ್ಕೆ ಬಂದಿದ್ದೇವೆ. ನೀವು ಮನವಿ ಕೊಡಲು ಬಿಡಲ್ಲ ಎಂದರೆ ಹೇಗೆ?” ಎಂದು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು ಮನವಿ ನೀಡಲು ಬಂದವರನ್ನು ತಡೆದ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡರು.
ಆರಂಭದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ತಡೆದಾಗ, ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಈ ವೇಳೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಪ್ರಜ್ವಲ್ ಗೌಡ ಕೆವಿ, ಪ್ರದೀಪ್, ರವೀಂದ್ರ ಶೆಟ್ಟಿ, ಶ್ರೀನಿವಾಸ ಮತ್ತು ಉದಯ ಕೊಯ್ಯೂರು ಎಂಬವರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಕೆಲ ಸಮಯದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಕೊನೆಯಲ್ಲಿ, ಪೊಲೀಸರು ಐದು ಜನರಿಗೆ ಮಾತ್ರ ತಹಸೀಲ್ದಾರ್ ಕಚೇರಿಗೆ ಹೋಗಿ ಮನವಿ ಸಲ್ಲಿಸುವಂತೆ ಸೂಚಿಸಿದರು. ಅದರಂತೆ, ಪ್ರಸನ್ನ ರವಿ, ಕುಸುಮಾವತಿ, ಮತ್ತು ಮಹೇಶ್ ಶೆಟ್ಟಿ ಅವರ ಸಹೋದರ ಮೋಹನ್ ಕುಮಾರ್ ಶೆಟ್ಟಿ ಸೇರಿದಂತೆ ಐದು ಮಂದಿಯ ನಿಯೋಗವು ತಹಸೀಲ್ದಾರ್ ಕಚೇರಿಯೊಳಗೆ ತೆರಳಿ ತಮ್ಮ ಮನವಿ ಪತ್ರವನ್ನು ಸಲ್ಲಿಸಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









