ಬೆಳ್ತಂಗಡಿ: ಸೌಜನ್ಯ ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡುವ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪುತ್ತೂರು ಸಹಾಯಕ ಕಮಿಷನರ್ (AC) ಕಚೇರಿಯಿಂದ ಮತ್ತೊಂದು ನೋಟಿಸ್ ಜಾರಿಯಾಗಿದೆ. ಈ ಹಿಂದೆಯೂ ಎಸಿ ಅವರು ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಆ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು.
ತಿಮರೋಡಿ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, ಹಿಂದಿನ ಗಡಿಪಾರು ಆದೇಶವನ್ನು ರದ್ದುಪಡಿಸಿತ್ತು. ಅಲ್ಲದೆ, ಆಡಳಿತಾತ್ಮಕ ಪ್ರಾಧಿಕಾರವು ತಿಮರೋಡಿ ಅವರನ್ನು ಗಡಿಪಾರು ಮಾಡಲು ಸೂಕ್ತ ಕಾರಣಗಳಿವೆ ಎಂದು ಭಾವಿಸಿದರೆ, ಮತ್ತೆ ಹೊಸದಾಗಿ ವಿಚಾರಣೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿತ್ತು. ಹೈಕೋರ್ಟ್ನ ಈ ನಿರ್ದೇಶನದ ಮೇರೆಗೆ, ಇದೀಗ ಪುತ್ತೂರು ಎಸಿ ಕಚೇರಿಯು ಗಡಿಪಾರು ಪ್ರಕ್ರಿಯೆಯನ್ನು ಮುಂದುವರಿಸಲು ಹೊಸ ನೋಟಿಸ್ ನೀಡಿದೆ.
ಲಭ್ಯ ಮಾಹಿತಿಯ ಪ್ರಕಾರ, ಮಹೇಶ್ ಶೆಟ್ಟಿ ತಿಮರೋಡಿ ಅವರು ಡಿಸೆಂಬರ್ 8 ರಂದು ಪುತ್ತೂರು ಎಸಿ ಮುಂದೆ ಖುದ್ದು ಹಾಜರಾಗಬೇಕಿದೆ. ಈ ಹೊಸ ನೋಟೀಸ್ನಲ್ಲಿ, ನ್ಯಾಯಾಲಯದ ಆದೇಶದ ನಂತರ ಅವರ ವಿರುದ್ಧ ಹೊಸದಾಗಿ ದಾಖಲಾಗಿರುವ ಪ್ರಕರಣಗಳನ್ನು ಕೂಡ ವಿಚಾರಣೆಗೆ ಪರಿಗಣಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಈ ವಿಚಾರಣೆಯ ಫಲಿತಾಂಶವು ಮುಂದಿನ ಗಡಿಪಾರು ಆದೇಶದ ಸಾಧ್ಯತೆಯನ್ನು ನಿರ್ಧರಿಸಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ









