ಕೊಡಗು: ವಿರಾಜಪೇಟೆಯಿಂದ ಕೇರಳ ರಾಜ್ಯದ ಕಡೆಗೆ ತೆರಳುತ್ತಿದ್ದ ಒಂದು ಪ್ರವಾಸಿ ಬಸ್ ಮಾಕುಟ್ಟ ರಸ್ತೆಯಲ್ಲಿ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ನಡೆದಿದೆ. ಈ ಅಗ್ನಿ ಅನಾಹುತವು ಮಗಡಿ ಪಾರೆ ಆಂಜನೇಯ ದೇವಾಲಯದ ಸಮೀಪ ನಸುಕಿನ ಜಾವ ಸಂಭವಿಸಿದೆ.
ಘಟನೆ ನಡೆದ ತಕ್ಷಣವೇ ಬಸ್ನ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಏಕಾಏಕಿ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸುವ ಮೊದಲು ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು ಮತ್ತು ಪರಿಶೀಲನೆ ಕೈಗೊಂಡರು.
ಬಸ್ ಸಂಪೂರ್ಣವಾಗಿ ರಸ್ತೆಯಲ್ಲೇ ಸುಟ್ಟು ಕರಕಲಾದ ಕಾರಣ ಕೊಡಗು-ಕೇರಳ ನಡುವಿನ ಮಾಕುಟ್ಟ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು. ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಮತ್ತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಮತ್ತು ಅಗ್ನಿಶಾಮಕ ದಳದವರ ಸಕಾಲಿಕ ಕ್ರಮದಿಂದ ಸಂಚಾರವನ್ನು ಪುನಃ ಸುಗಮಗೊಳಿಸಲು ಕ್ರಮ ವಹಿಸಲಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









