ಮಂಗಳೂರು: “ಕೊಂಡಾಣ ಮತ್ತು ಷಣ್ಮುಖ ದೇವಾಲಯದ ಭಂಡಾರ ಕಳ್ಳತನದ ಆರೋಪವು ಸಂಪೂರ್ಣ ನಿರಾಧಾರವಾಗಿದ್ದು, ರವಿ ಪ್ರಸನ್ನ ಅವರು ಈ ಆರೋಪವನ್ನು ಸಾಬೀತುಪಡಿಸಲಿ,” ಎಂದು ತಮ್ಮಣ್ಣ ಶೆಟ್ಟಿ ಅವರು ಬಹಿರಂಗ ಸವಾಲು ಹಾಕಿದ್ದಾರೆ. ಇಂದು ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆರೋಪ ಸಾಬೀತಾದರೆ ದೈವದ ಮಣ್ಣಿನಲ್ಲಿ ಮಾತನಾಡುವುದಿಲ್ಲ: ತಮ್ಮ ಮೇಲಿನ ಕಳ್ಳತನದ ಆರೋಪವನ್ನು ಕಟುವಾಗಿ ವಿರೋಧಿಸಿದ ಅವರು, “ಒಂದು ವೇಳೆ ರವಿ ಪ್ರಸನ್ನ ಅವರ ಆರೋಪಗಳು ಸತ್ಯವಾಗಿದ್ದರೆ ನಾನು ಕೊಂಡಾಣದ ಮಣ್ಣಿನಲ್ಲಿ ಇನ್ನು ಮುಂದೆ ದೈವದ ಬಗ್ಗೆ ಮಾತನಾಡುವುದಿಲ್ಲ. ಒಂದು ವೇಳೆ ಸುಳ್ಳೆಂದು ಸಾಬೀತಾದರೆ ಅವರನ್ನು ಕುತಂತ್ರಿ ಎಂದು ಕರೆಯುತ್ತೇನೆ,” ಎಂದು ಗುಡುಗಿದರು.
ಸಂಪ್ರದಾಯದ ಉಲ್ಲಂಘನೆಗೆ ಆಕ್ರೋಶ: ಜಾರಂದಾಯ ಬಂಟ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೆಟ್ಟಿ, “ದೈವದ ಪ್ರಾರ್ಥನೆಯು ತುಳು ಭಾಷೆಯಲ್ಲಿ ನಡೆಯುವುದು ವಾಡಿಕೆ. ಆದರೆ ಸಿನಿಮಾ ಕಲಾವಿದರನ್ನು ಮೆಚ್ಚಿಸಲು ಕನ್ನಡದಲ್ಲಿ ಪ್ರಾರ್ಥನೆ ಮಾಡಲಾಗಿದೆ. ಕೋಲದ ವೇಳೆ ಕೋಲಧಾರಿಗಳು ಕ್ಯಾಮರಾಗಳಿಗೆ ಸನ್ನೆ ಮಾಡುವುದು ದೈವಿಕ ನಿಯಮಗಳಿಗೆ ವಿರುದ್ಧವಾಗಿದೆ. ಕದ್ರಿಯಲ್ಲಿ ಕೊಡಿ ಏರಿದ ನಂತರವಷ್ಟೇ ಜಾರಂದಾಯ ನೇಮ ನಡೆಯಬೇಕೆಂಬ ನಿಯಮವಿದ್ದರೂ, ಕೇವಲ ಹಣದ ಉದ್ದೇಶಕ್ಕಾಗಿ ಆಡಳಿತ ಮಂಡಳಿ ಸಂಪ್ರದಾಯವನ್ನು ಗಾಳಿಗೆ ತೂರುತ್ತಿದೆ,” ಎಂದು ದೂರಿದರು.
ದೈವಾರಾಧನೆ ಎಂಬುದು ವ್ಯಾಪಾರವಾಗಬಾರದು: ಸಿನಿಮಾ ಪ್ರಭಾವದಿಂದ ದೈವಾರಾಧನೆಯು ಇಂದು ಪ್ರದರ್ಶನ ವಸ್ತುವಾಗುತ್ತಿದೆ ಎಂದು ವಿಷಾದಿಸಿದ ಅವರು, “ಕಾಂತಾರ ಅಂತಹ ಸಿನಿಮಾಗಳ ಪ್ರಚಾರಕ್ಕಾಗಿ ಮತ್ತು ವೈಯಕ್ತಿಕ ಸ್ವಾರ್ಥಕ್ಕಾಗಿ ದೈವವನ್ನು ಬೀದಿಗಳಲ್ಲಿ ಕುಣಿಸುವುದು, ರಾಜಕಾರಣಿಗಳನ್ನು ಸ್ವಾಗತಿಸಲು ಬಳಸಿಕೊಳ್ಳುವುದು ಸರಿಯಲ್ಲ. ದೈವಸ್ಥಾನಗಳು ಇಂದು ವ್ಯಾಪಾರ ಕೇಂದ್ರಗಳಾಗಿ ಮಾರ್ಪಡುತ್ತಿವೆ,” ಎಂದು ಆರೋಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









