ಮಂಗಳೂರು : ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯ ಎಎಸ್ಐ ಹರಿಶ್ಚಂದ್ರ ಬೇರಿಕೆ ಅವರು ತಮ್ಮ ನಿವಾಸದಲ್ಲಿ ಮೈಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಮೂಲದ ಇವರು ಕಳೆದ 27 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಒಂದು ವರ್ಷದ ಹಿಂದೆಯಷ್ಟೇ ಎಎಸ್ಐ ಆಗಿ ಪದೋನ್ನತಿ ಪಡೆದಿದ್ದರು. ಮೂರು ವರ್ಷಗಳ ಹಿಂದೆ ಕದ್ರಿ ವ್ಯಾಸನಗರದಲ್ಲಿ ಹೊಸ ಮನೆ ನಿರ್ಮಿಸಿ ಅಲ್ಲಿ ನೆಲೆಸಿದ್ದರು.
ಹರಿಶ್ಚಂದ್ರ ಅವರ ಪತ್ನಿ ಮತ್ತು ಮಕ್ಕಳು ರಜೆಯ ಹಿನ್ನೆಲೆಯಲ್ಲಿ ಊರಿಗೆ ತೆರಳಿದ್ದರಿಂದ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಇಂದು ಬೆಳಿಗ್ಗೆ ಅವರು ದೇವರಿಗೆ ಹೂವುಗಳನ್ನು ಕೊಯ್ಯುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ಆದರೆ, ಬೆಳಿಗ್ಗೆ 10:30ರ ಸುಮಾರಿಗೆ ಅವರ ಮನೆಯ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಬೊಬ್ಬೆ ಕೇಳಿಬಂದಿದೆ. ತಕ್ಷಣವೇ ನೆರೆಹೊರೆಯವರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಅವರು ಗಂಭೀರವಾಗಿ ಸುಟ್ಟು ಹೋಗಿದ್ದರು.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕದ್ರಿ ಪೊಲೀಸರು ಮತ್ತು ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿತು. ಗಂಭೀರವಾಗಿ ಗಾಯಗೊಂಡಿದ್ದ ಹರಿಶ್ಚಂದ್ರ ಅವರನ್ನು ತಕ್ಷಣವೇ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳ ಪರಿಶೀಲನೆಯ ವೇಳೆ ಮನೆಯ ಹೊರಭಾಗದಲ್ಲಿ ಪೆಟ್ರೋಲ್ ತುಂಬಿದ್ದ ಅರ್ಧ ಸುಟ್ಟ ಬಿಸ್ಲರಿ ಬಾಟಲಿ ಪತ್ತೆಯಾಗಿದೆ. ಅವರು ಮೈಗೆ ಪೆಟ್ರೋಲ್ ಸುರಿದುಕೊಂಡ ಸಂದರ್ಭದಲ್ಲಿ ಪಕ್ಕದ ಶೀಟ್ಗಳು, ಫೈಬರ್ ಪೈಪ್ ಹಾಗೂ ನೆಲದ ಮ್ಯಾಟ್ಗಳಿಗೂ ಬೆಂಕಿ ತಗುಲಿ ಹಾನಿಯಾಗಿದೆ. ಕದ್ರಿ ಠಾಣೆಯ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









