ಮಂಗಳೂರು : ದೂರದ ಊರಿನಿಂದ ಬದುಕಿನ ಕನಸು ಹೊತ್ತು ಬಂದ ಯುವಕನೊಬ್ಬ, ವಿಧಿಯಾಟಕ್ಕೆ ಸಿಲುಕಿ ಅಸಹಾಯಕತೆಯ ಪರಮಾವಧಿಯಲ್ಲಿ ಮರವೇರಿ ಕುಳಿತ ಘಟನೆ ಮಂಗಳೂರಿನ ಕರಂಗಾಲ್ಪಾಡಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಬಾಗಲಕೋಟೆ ಮೂಲದ 24 ವರ್ಷದ ಭೀಮ ಎಂಬ ಯುವಕನೇ ಈ ದುರಂತಕ್ಕೆ ಸಾಕ್ಷಿಯಾದವನು. ಇತ್ತೀಚೆಗಷ್ಟೇ ತನ್ನ ಸ್ನೇಹಿತನೊಬ್ಬನ ಜೊತೆ ಮಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ ಈತನಿಗೆ ನಗರದ ಬದುಕು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಬಂದ ಮೊದಲ ದಿನಗಳಲ್ಲಿ ಕೆಲಸ ಸಿಗದೆ ಪರದಾಡಿದ ಭೀಮನಿಗೆ, ಸಂಕಷ್ಟದ ಸಮಯದಲ್ಲಿ ಆಸರೆಯಾಗಬೇಕಿದ್ದ ಸ್ನೇಹಿತನೇ ಕೈಕೊಟ್ಟು ನಾಪತ್ತೆಯಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿತ್ತು.
ಹಸಿವು ಮತ್ತು ಒಂಟಿತನದಿಂದ ಕಂಗಾಲಾದ ಭೀಮ, ಕೊನೆಗೆ ಜೀವನದ ಮೇಲಿನ ಭರವಸೆ ಕಳೆದುಕೊಂಡು ಕರಂಗಾಲ್ಪಾಡಿಯ ರಸ್ತೆ ಬದಿಯಲ್ಲಿದ್ದ ಬೃಹತ್ ಅಶ್ವತ್ಥ ಮರವನ್ನು ಏರಿ ಕುಳಿತಿದ್ದಾನೆ. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಆತ ಮರದ ಎತ್ತರದ ಕೊಂಬೆಯಲ್ಲಿ ಮೌನವಾಗಿ ಕುಳಿತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಜನದಟ್ಟಣೆಯ ಪ್ರದೇಶದಲ್ಲಿ ನಡೆದ ಈ ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ಸಿಗುತ್ತಿದ್ದಂತೆಯೇ ಕದ್ರಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಮರದ ಮೇಲಿದ್ದ ಭೀಮನನ್ನು ಕೆಳಕ್ಕೆ ಇಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಆತನ ಮನವೊಲಿಸುವಲ್ಲಿ ಯಶಸ್ವಿಯಾದ ರಕ್ಷಣಾ ತಂಡವು, ಅತ್ಯಂತ ಜಾಗರೂಕತೆಯಿಂದ ಆತನನ್ನು ಕೆಳಕ್ಕೆ ಇಳಿಸಿದೆ. ಪ್ರಸ್ತುತ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿರುವ ಭೀಮನನ್ನು ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆಗಾಗಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಆತನ ಮನೆಯವರನ್ನು ಸಂಪರ್ಕಿಸುವ ಪ್ರಯತ್ನದಲ್ಲಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









