ಮಂಗಳೂರು : ನಗರದ ಒಳಚರಂಡಿ (ಯುಜಿಡಿ) ವ್ಯವಸ್ಥೆಯ ಅವ್ಯವಸ್ಥೆ ಹಾಗೂ ಮಳೆನೀರು ಚರಂಡಿಗಳಿಗೆ ಅಪಾರ್ಟ್ಮೆಂಟ್ಗಳ ಕೊಳಚೆ ನೀರನ್ನು ಹರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಒಂದು ಗಂಟೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ದೂರುಗಳ ಸರಮಾಲೆಯೇ ಹರಿದುಬಂದಿದೆ. ವಿಶೇಷವಾಗಿ ಸುರತ್ಕಲ್, ಕೃಷ್ಣಾಪುರ, ಮುಕ್ಕ ಮತ್ತು ಯೆಯ್ಯಾಡಿ ಭಾಗದ ನಿವಾಸಿಗಳು, ತೆರೆದ ಮಳೆನೀರು ಚರಂಡಿಗಳಲ್ಲಿ ಮಲಿನ ನೀರು ಹರಿಯುತ್ತಿರುವುದರಿಂದ ಬಸ್ ನಿಲ್ದಾಣದ ಬಳಿ ಕಾಯುವ ಮಕ್ಕಳು ಮತ್ತು ನಾಗರಿಕರು ಅನುಭವಿಸುತ್ತಿರುವ ದುರ್ವಾಸನೆ ಹಾಗೂ ಆರೋಗ್ಯದ ತೊಂದರೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಹಲವು ದಶಕಗಳಿಂದ ಮನವಿ ನೀಡುತ್ತಿದ್ದರೂ ಒಳಚರಂಡಿ ಸಂಪರ್ಕ ಕಲ್ಪಿಸದ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಅಪಾರ್ಟ್ಮೆಂಟ್ಗಳು ಮತ್ತು ವಸತಿ ಸಮುಚ್ಚಯಗಳು ತಮ್ಮ ಕೊಳಚೆ ನೀರನ್ನು ಮಳೆನೀರು ಚರಂಡಿಗೆ ಬಿಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ ಪಾಲಿಕೆಯಿಂದ ಈ ಬಗ್ಗೆ ಅಭಿಯಾನ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಅಪಾರ್ಟ್ಮೆಂಟ್ಗಳು ತಮ್ಮದೇ ಆದ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (STP) ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನಗರದ ಶಿಥಿಲಗೊಂಡಿರುವ ಹಳೆಯ ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನವೀಕರಿಸಲು ಸುಮಾರು 1200 ಕೋಟಿ ರೂಪಾಯಿಗಳ ಬೃಹತ್ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದರೊಂದಿಗೆ ನಗರದ ಪಾದಚಾರಿ ಮಾರ್ಗ, ಅವ್ಯವಸ್ಥಿತ ಪಾರ್ಕಿಂಗ್ ಮತ್ತು ತೆರೆದ ಚರಂಡಿಗಳಿಗೆ ಸ್ಲ್ಯಾಬ್ ಹಾಕುವ ಕುರಿತಾದ ದೂರುಗಳಿಗೂ ಶೀಘ್ರ ಪರಿಹಾರದ ಭರವಸೆ ನೀಡಿದರು.
ಜಲ ಸಮಸ್ಯೆ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಪ್ಪಿನಮೊಗರು ಮತ್ತು ಉಳ್ಳಾಲ ಹೊಯಿಗೆಯನ್ನು ಸಂಪರ್ಕಿಸುವ ಪಾದಚಾರಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರಾವಳಿ ನಿಯಂತ್ರಣ ವಲಯದ (CRZ) ಅನುಮತಿಗಾಗಿ ಕಾಯಲಾಗುತ್ತಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇನ್ನು ನಗರದ ಕೆಲವು ಭಾಗಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಅಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಜಲಸಿರಿ ಯೋಜನೆಯಡಿ ಶೀಘ್ರದಲ್ಲೇ ನೀರು ಪೂರೈಕೆ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸದಂತೆ ಮುನ್ನೆಚ್ಚರಿಕೆ ವಹಿಸಲು ಜನವರಿ 29ರಂದು ಜಿಲ್ಲೆಯಾದ್ಯಂತದ ಅಧಿಕಾರಿಗಳ ವಿಶೇಷ ಸಭೆ ಕರೆಯಲಾಗಿದ್ದು, ಸುಸ್ಥಿರ ನೀರು ಸರಬರಾಜಿಗೆ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









