ಮಂಗಳೂರು : ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರದ ಸಿಹಿ ಸುದ್ದಿ ನಿರೀಕ್ಷಿಸುತ್ತಿದ್ದ ಕರಾವಳಿಗರಿಗೆ ರೈಲ್ವೆ ಇಲಾಖೆ ಆಘಾತ ನೀಡಿದೆ. ಪ್ರಸ್ತಾವಿತ ವಂದೇ ಭಾರತ್ ರೈಲು ಮಂಗಳೂರು ನಗರವನ್ನು ಪ್ರವೇಶಿಸದೆ ಪಡೀಲ್ ಬೈಪಾಸ್ ಮೂಲಕ ನೇರವಾಗಿ ಗೋವಾಕ್ಕೆ ತೆರಳಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದರ ಜೊತೆಗೆ, ಗೋವಾಕ್ಕೆ ತೆರಳುವ ಈ ರೈಲಿನ ವೇಳಾಪಟ್ಟಿಯನ್ನು ಹೊಂದಾಣಿಕೆ ಮಾಡಲು ಜನಪ್ರಿಯ ‘ಗೊಮ್ಮಟೇಶ್ವರ ಎಕ್ಸ್ಪ್ರೆಸ್’ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲು ಇಲಾಖೆ ನಿರ್ಧರಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಹಗಲು ಹೊತ್ತಿನಲ್ಲಿ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಆಸರೆಯಾಗಿದ್ದ ಈ ರೈಲಿನ ಸಮಯ ಬದಲಾದರೆ ಜನಸಾಮಾನ್ಯರಿಗೆ ದೊಡ್ಡ ಮಟ್ಟದ ತೊಂದರೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಹಿಂದೆ ಬೆಳಗ್ಗೆ 7 ಗಂಟೆಗೆ ಹೊರಟು ಸಂಜೆ ವೇಳೆಗೆ ತಲುಪುತ್ತಿದ್ದ ಗೊಮ್ಮಟೇಶ್ವರ ಎಕ್ಸ್ಪ್ರೆಸ್, ಪ್ರಯಾಣಿಕರ ನಿರಂತರ ಒತ್ತಾಯದ ಬಳಿಕವಷ್ಟೇ ವ್ಯವಸ್ಥಿತ ವೇಳಾಪಟ್ಟಿಯನ್ನು ಪಡೆದುಕೊಂಡಿತ್ತು. ಆದರೆ ಈಗ ವಂದೇ ಭಾರತ್ ರೈಲಿಗೆ ಹಾದಿ ಸುಗಮಗೊಳಿಸಲು ಈ ರೈಲನ್ನು ಮಧ್ಯಾಹ್ನಕ್ಕೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಸಮಯ ಬದಲಾವಣೆಯಾದರೆ ಮಂಗಳೂರು ಮತ್ತು ಬೆಂಗಳೂರು ನಡುವಿನ ಹಗಲು ಪ್ರಯಾಣ ದುಸ್ತರವಾಗಲಿದ್ದು, ತಡರಾತ್ರಿ ಸಂಚರಿಸುವ ಅನಿವಾರ್ಯತೆ ಎದುರಾಗಲಿದೆ. ಈ ನಿರ್ಧಾರವು ಸಾವಿರಾರು ಪ್ರಯಾಣಿಕರ ಹಿತಾಸಕ್ತಿಯನ್ನು ಬಲಿ ಕೊಡುತ್ತಿದೆ ಎಂದು ರೈಲ್ವೆ ಯಾತ್ರಿಗಳ ಸಂಘಟನೆಗಳು ಆಕ್ರೋಶ ಹೊರಹಾಕಿವೆ.
ಈಗಾಗಲೇ ಈ ಕುರಿತು ರೈಲ್ವೆ ಸಚಿವರು ಮತ್ತು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ವಂದೇ ಭಾರತ್ ರೈಲು ಪಡೀಲ್ ಮೂಲಕವೇ ಸಂಚರಿಸಲಿ, ಆದರೆ ಯಾವುದೇ ಕಾರಣಕ್ಕೂ ಗೊಮ್ಮಟೇಶ್ವರ ಎಕ್ಸ್ಪ್ರೆಸ್ನ ಈಗಿನ ವೇಳಾಪಟ್ಟಿಯನ್ನು ಬದಲಿಸಬಾರದು ಎಂದು ಒತ್ತಾಯಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಅಭಿಯಾನಗಳು ತೀವ್ರಗೊಂಡಿದ್ದು, ರೈಲ್ವೆ ಇಲಾಖೆ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ರೈಲು ತಡೆ ಪ್ರತಿಭಟನೆ ನಡೆಸುವುದಾಗಿ ಪ್ರಯಾಣಿಕರ ಹಿತರಕ್ಷಣಾ ಸಮಿತಿಗಳು ಎಚ್ಚರಿಸಿವೆ. ನೈರುತ್ಯ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಕರಾವಳಿಯಾದ್ಯಂತ ಪ್ರತಿರೋಧದ ಅಲೆ ಎದ್ದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









