ಮಂಗಳೂರು : ಸಮರ್ಪಕ ಅಡುಗೆ ಅನಿಲ ವಿತರಣೆಗೆ ಆಗ್ರಹಿಸಿ ಹಾಗೂ ಗ್ಯಾಸ್ ಏಜೆನ್ಸಿಗಳ ಅಕ್ರಮ ದಂಧೆಯನ್ನು ಖಂಡಿಸಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಎದುರು ಮಂಗಳವಾರ ತೀವ್ರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಅವರು, ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳಲು ಗ್ಯಾಸ್ ಮಾಫಿಯಾ ಸಕ್ರಿಯವಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಗ್ಯಾಸ್ ವಿತರಣೆಯಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುವ ಮೂಲಕ ಏಜೆನ್ಸಿಗಳು ಕಾಳಸಂತೆಯಲ್ಲಿ ಲಾಭ ಗಳಿಸುತ್ತಿದ್ದು, ಇದನ್ನು ತಡೆಯಲು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಕಿಡಿಕಾರಿದರು.
ಸ್ಥಳೀಯವಾಗಿ ಅಡುಗೆ ಅನಿಲದ ತೀವ್ರ ಅಭಾವವಿದ್ದರೂ, ಮಂಗಳೂರಿನ ಎಚ್ಪಿಸಿಎಲ್ (HPCL) ಸ್ಥಾವರಗಳಿಂದ ಪ್ರತಿದಿನ ಸುಮಾರು 300ಕ್ಕೂ ಹೆಚ್ಚು ಬುಲೆಟ್ ಟ್ಯಾಂಕರ್ಗಳು ಮಹಾರಾಷ್ಟ್ರಕ್ಕೆ ಅನಿಲವನ್ನು ಸಾಗಿಸುತ್ತಿವೆ ಎಂದು ಇಮ್ತಿಯಾಜ್ ಆಕ್ರೋಶ ವ್ಯಕ್ತಪಡಿಸಿದರು. ದೇಶವು ಆರ್ಥಿಕವಾಗಿ ವಿಷಮ ಪರಿಸ್ಥಿತಿಯಲ್ಲಿರುವಾಗ ಇಂತಹ ಕೃತಕ ಅಭಾವ ಸೃಷ್ಟಿಸಿ ಜನರ ಜೇಬಿಗೆ ಕತ್ತರಿ ಹಾಕುವ ಹುನ್ನಾರ ನಡೆಯುತ್ತಿದೆ. ಸಾಮಾನ್ಯ ಜನರು ಅಡುಗೆ ಅನಿಲಕ್ಕಾಗಿ ಏಜೆನ್ಸಿಗಳ ಮುಂದೆ ಗಂಟೆಗಟ್ಟಲೆ ಸಾಲು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಒಂದೆಡೆ ಕೇಂದ್ರ ಸಚಿವರು ದೇಶದಲ್ಲಿ ಗ್ಯಾಸ್ ಕೊರತೆಯಿಲ್ಲ ಎಂಬ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದರೆ, ಇನ್ನೊಂದೆಡೆ ರಾಜ್ಯ ಸರ್ಕಾರವು ನಾಗರಿಕ ಸರಬರಾಜು ವ್ಯವಸ್ಥೆಯ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ನವೀನ್ ಕೊಂಚಾಡಿ, ಭಾರತಿ ಬೋಳಾರ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಒಂದು ವೇಳೆ ಗ್ಯಾಸ್ ಏಜೆನ್ಸಿಗಳು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿ ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ಯಾಸ್ ಏಜೆನ್ಸಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಂಘಟನೆಯು ಎಚ್ಚರಿಕೆ ನೀಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









