ಮಂಗಳೂರು : ಬೆಂಗಳೂರಿನ ಆರ್ಯಭಟ ಕಲ್ಚರಲ್ ಆರ್ಗನೈಸೇಷನ್ ನೀಡುವ 51ನೇ ವರ್ಷದ ಪ್ರತಿಷ್ಠಿತ ‘ಅಂತರ್ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಗೆ ಕರಾವಳಿ ಕರ್ನಾಟಕದ ಹಿರಿಯ ನಾಟಕಕಾರ ಮತ್ತು ನಿರ್ದೇಶಕ ಡಾ. ಸಂಜೀವ ದಂಡೆಕೇರಿ ಆಯ್ಕೆಯಾಗಿದ್ದಾರೆ. ತುಳು ರಂಗಭೂಮಿ ಹಾಗೂ ಚಿತ್ರರಂಗಕ್ಕೆ ಅವರು ನೀಡಿರುವ ಅನುಪಮ ಕೊಡುಗೆ ಮತ್ತು ಅವರ ಸಾಮಾಜಿಕ, ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಈ ಗೌರವವನ್ನು ಘೋಷಿಸಲಾಗಿದೆ. ಮೇ 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ವೃತ್ತಿಯಿಂದ ಆಯುರ್ವೇದ ವೈದ್ಯರಾಗಿರುವ ಡಾ. ದಂಡೆಕೇರಿ ಅವರು ತುಳು ಸಾಹಿತ್ಯ ಮತ್ತು ಕಲಾ ಲೋಕದಲ್ಲಿ ಅಳಿಸದ ಮುದ್ರೆ ಒತ್ತಿದ್ದಾರೆ. 1962ರಲ್ಲಿ ‘ಕಲ್ಪಂದಿ ತಿಮ್ಮೆ’ ನಾಟಕದ ಮೂಲಕ ರಂಗಪ್ರವೇಶ ಮಾಡಿದ ಇವರು, ಸುಮಾರು 20ಕ್ಕೂ ಹೆಚ್ಚು ಜನಪ್ರಿಯ ನಾಟಕಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ನಾಟಕ ‘ಬಯ್ಯ ಮಲ್ಲಿಗೆ’ ಕಳೆದ 58 ವರ್ಷಗಳಲ್ಲಿ ದೇಶ-ವಿದೇಶಗಳಲ್ಲಿ ಸುಮಾರು 28 ಸಾವಿರ ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿದೆ. ಇದಲ್ಲದೆ ‘ಪೊಣ್ಣ ಜನ್ಮ’, ‘ಕಾವೇರಿ’, ‘ಬೊಲ್ಲಿ ಮೂಡ್ಂಡ್’ ಸೇರಿದಂತೆ ಹತ್ತಾರು ಯಶಸ್ವಿ ನಾಟಕಗಳು ಇವರ ಲೇಖನಿಯಿಂದ ಮೂಡಿಬಂದಿವೆ.
ರಂಗಭೂಮಿಯಷ್ಟೇ ಅಲ್ಲದೆ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದ ಇವರು, ಹಲವು ಸಿನಿಮಾಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಇವರ ಜನಪ್ರಿಯ ನಾಟಕ ‘ಬಯ್ಯ ಮಲ್ಲಿಗೆ’ ಅದೇ ಹೆಸರಿನಲ್ಲಿ ಸಿನಿಮಾ ಆಗಿ ಮೂಡಿಬಂದಿದ್ದರೆ, ‘ಬೊಳ್ಳಿದೋಟ’ ಎಂಬ ಚಿತ್ರವನ್ನು ಇವರೇ ನಿರ್ಮಿಸಿದ್ದಾರೆ. ಕಲೆ ಮತ್ತು ಸಾಹಿತ್ಯದ ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಇವರಿಗೆ ಈಗಾಗಲೇ ತುಳು ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









