ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಹಾಗೂ ಬಂಟ್ವಾಳದ ಶ್ರೀ ವೆಂಕಟರಮಣಸ್ವಾಮೀ ಮಹಾವಿದ್ಯಾಲಯದ (ಎಸ್ವಿಎಸ್) ಸಂಯುಕ್ತಾಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರು, ಕನ್ನಡ ಸಾಹಿತ್ಯ ಪರಿಷತ್ತು ದೇಶದಲ್ಲೇ ಅತ್ಯಂತ ವ್ಯವಸ್ಥಿತವಾಗಿ ರೂಪಿತವಾದ ಸಂಸ್ಥೆಯಾಗಿದ್ದು, ಭಾಷೆ ಮತ್ತು ಸಾಹಿತ್ಯದ ಉನ್ನತಿಗಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಇಂತಹ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀ ಮಹಾಬಲೇಶ್ವರ ಹೆಬ್ಬಾರ್ ಅವರು ಕನ್ನಡ ಭಾಷೆಯ ಐತಿಹಾಸಿಕ ಮಹತ್ವವನ್ನು ವಿವರಿಸಿದರು. ಭಾಷೆಯು ಇತಿಹಾಸವನ್ನು ಮುಂದಕ್ಕೆ ಕೊಂಡೊಯ್ಯುವ ಪ್ರವಾಹದಂತಿದೆ ಎಂದು ಬಣ್ಣಿಸಿದ ಅವರು, ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮಹತ್ವದ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಡಿ. ಮಂಚಿ ಅವರು ಮಾತನಾಡಿ, ಯಾವುದೇ ಪ್ರಚಾರದ ಹಪಾಹಪಿ ಇಲ್ಲದೆ ಕನ್ನಡ ಭಾಷೆಯ ಉಳಿವು ಮತ್ತು ಸಾಹಿತ್ಯ ಪ್ರಚಾರಕ್ಕಾಗಿ ಕಸಾಪ ಅವಿರತವಾಗಿ ದುಡಿಯುತ್ತಿದೆ ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಹಾಗೂ ಜಿಲ್ಲಾ ಕಾರ್ಯಕಾರಿ ಸದಸ್ಯ ಪೂವಪ್ಪ ನೇರಳೆಕಟ್ಟೆ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಶಿವಣ್ಣಪ್ರಭು ಸ್ವಾಗತಿಸಿ, ಡಾ. ಸುಯೋಗವರ್ಧನ್ ವಂದಿಸಿದರು. ಡಾ. ಕಾಶೀನಾಥ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರೆ, ವಿದ್ಯಾರ್ಥಿನಿಯರಾದ ವಂದಿತಾ ಮತ್ತು ಪನ್ನಗಶ್ರೀ ನಾಡಗೀತೆ ಹಾಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









