ಮಂಗಳೂರು : ಮಾನವೀಯತೆ ಮತ್ತು ಪ್ರಾಮಾಣಿಕತೆ ಮೆರೆದ ಘಟನೆಯೊಂದು ನಡೆದಿದ್ದು, ಆಟೋ ರಿಕ್ಷಾದಲ್ಲಿ ಪ್ರಯಾಣಿಕರು ಮರೆತು ಬಿಟ್ಟಿದ್ದ ಅಂದಾಜು ₹25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಾರಸುದಾರರಿಗೆ ಸುರಕ್ಷಿತವಾಗಿ ಮರಳಿಸಲಾಗಿದೆ. ಮಲ್ಲಿಕಟ್ಟೆಯ ನಿವಾಸಿ ಶ್ರೀಮತಿ ಲೋಲಿಟ್ಟ ಮತ್ತು ಅವರ ಕುಟುಂಬದವರು ಮಲ್ಲಿಕಟ್ಟೆಯಿಂದ ಮೇರಿ ಹಿಲ್ ಕಡೆಗೆ ಆಟೋದಲ್ಲಿ ಪ್ರಯಾಣಿಸುವಾಗ, ಚಿನ್ನಾಭರಣಗಳಿದ್ದ ತಮ್ಮ ವ್ಯಾನಿಟಿ ಬ್ಯಾಗ್ ಅನ್ನು ಆಟೋದಲ್ಲಿಯೇ ಮರೆತು ಇಳಿದಿದ್ದರು. ಮನೆಗೆ ಹೋದ ಮೇಲೆ ಬ್ಯಾಗ್ ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಆತಂಕಕ್ಕೊಳಗಾದ ಅವರು ತಕ್ಷಣವೇ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಗೆ ಧಾವಿಸಿ ಮಾಹಿತಿ ನೀಡಿದ್ದರು.
ದೂರು ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ಕದ್ರಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ನೆರವಿನಿಂದ ಅವರು ಪ್ರಯಾಣಿಸಿದ ಆಟೋ ರಿಕ್ಷಾವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಈ ನಡುವೆ ಆಟೋ ಚಾಲಕ ರೋಷನ್ ಅವರು ಕೂಡ ತಮ್ಮ ವಾಹನದಲ್ಲಿ ಬ್ಯಾಗ್ ಇರುವುದನ್ನು ಗಮನಿಸಿ, ಅದನ್ನು ಸುರಕ್ಷಿತವಾಗಿ ಇರಿಸಿಕೊಂಡು ತಕ್ಷಣವೇ ಪೊಲೀಸರ ತನಿಖೆಗೆ ಸಹಕರಿಸಿದರು. ಚಾಲಕನ ಈ ಪ್ರಾಮಾಣಿಕ ನಡೆ ಪ್ರಕರಣವನ್ನು ಸುಲಭವಾಗಿ ಸುಖಾಂತ್ಯಗೊಳಿಸಲು ನೆರವಾಯಿತು.
ಅಂತಿಮವಾಗಿ ಮಂಗಳೂರು ಪೂರ್ವ ಪೊಲೀಸ್ ಉಪನಿರೀಕ್ಷಕರ ಸಮ್ಮುಖದಲ್ಲಿ, ಪತ್ತೆಯಾದ ₹25 ಲಕ್ಷ ಮೌಲ್ಯದ ಬೆಲೆಬಾಳುವ ಆಭರಣಗಳನ್ನು ವಾರಸುದಾರರಾದ ಲೋಲಿಟ್ಟ ಅವರಿಗೆ ಹಸ್ತಾಂತರಿಸಲಾಯಿತು. ಕಳೆದುಹೋದ ಅಷ್ಟೂ ಆಭರಣಗಳು ಯಾವುದೇ ಹಾನಿಯಿಲ್ಲದೆ ಮರಳಿ ಸಿಕ್ಕಿದ್ದಕ್ಕೆ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದು, ಪೊಲೀಸರ ತ್ವರಿತ ಕಾರ್ಯಾಚರಣೆ ಹಾಗೂ ಆಟೋ ಚಾಲಕ ರೋಷನ್ ಅವರ ನಿಷ್ಠೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









