ಬಂಟ್ವಾಳ : ಸಿಡಿಲು ಬಡಿದು ತೀವ್ರ ಸ್ವರೂಪದ ಹಾನಿಗೊಳಗಾಗಿರುವ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಹಶಿಲ್ದಾರ್ ಮಂಜುನಾಥ್ ಅವರೊಂದಿಗೆ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಡಿಲಿನ ಭೀಕರತೆಗೆ ದೇವಸ್ಥಾನದ ದೇವರ ಗರ್ಭಗುಡಿಯ ಪ್ರಾಕಾರವು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಪರಿಸ್ಥಿತಿಯನ್ನು ವೀಕ್ಷಿಸಿದ ಶಾಸಕರು ತಕ್ಷಣವೇ ಸ್ಪಂದಿಸಿದರು. ಗರ್ಭಗುಡಿಯ ಪ್ರಾಕಾರವನ್ನು ಶೀಘ್ರವಾಗಿ ಸರಿಪಡಿಸುವ ನಿಟ್ಟಿನಲ್ಲಿ ಒಟ್ಟಾರೆ ಸಂಭವಿಸಿರುವ ನಷ್ಟದ ನಿಖರ ವಿವರಗಳನ್ನು ಸಿದ್ಧಪಡಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ತುರ್ತಾಗಿ ಕೈಗೊಳ್ಳಬೇಕಾದ ದುರಸ್ತಿ ಕಾರ್ಯಗಳಿಗೆ ತಕ್ಷಣ ಕ್ರಮ ಜರುಗಿಸುವಂತೆ ಆದೇಶಿಸಿದರು. ಇದೇ ವೇಳೆ ದೇವಸ್ಥಾನದ ಗರ್ಭಗುಡಿಯ ಶಾಶ್ವತ ಪುನರ್ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳದಲ್ಲಿಯೇ ಪ್ರಶ್ನಾಚಿಂತನೆ ನಡೆಸಿ ನಿರ್ಧಾರ ಕೈಗೊಳ್ಳುವ ಕುರಿತು ಪ್ರಮುಖರೊಂದಿಗೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲು ಗುತ್ತು, ಟ್ರಸ್ಟಿಗಳಾದ ಶಿವರಾಮ ಶೆಟ್ಟಿ, ಲಾವಣ್ಯ ಬಲ್ಲಾಳ್, ಶಿವಪ್ಪ ಪೂಜಾರಿ, ಜಯನಾಯ್ಕ್ ಹಾಗೂ ಲಿಂಗಪ್ಪ ಪೂಜಾರಿ ಉಪಸ್ಥಿತರಿದ್ದರು. ಇವರೊಂದಿಗೆ ಪ್ರಮುಖರಾದ ಸುದರ್ಶನ ಬಜ, ಪ್ರಕಾಶ್ ಅಂಚನ್, ಶಾಂತಪ್ಪ ಪೂಜಾರಿ, ಧನಂಜಯ ಶೆಟ್ಟಿ ಸರಪಾಡಿ, ಶಶಿಕಾಂತ್ ಶೆಟ್ಟಿ ಆರ್ಮುಡಿ, ರಾಮಕೃಷ್ಣ ಮಯ್ಯ, ಸುರೇಖಾ ಹೆಗ್ಡೆ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಜಯರಾಮ ಅಡಪ ದೆಚ್ಚಾರು, ತಿಲಕ್ ಬಂಗೇರ, ಮೋನಪ್ಪ ಪೂಜಾರಿ, ಸಂಜೀವ ಪೂಜಾರಿ, ವಸಂತ ದೆಚ್ಚಾರು, ಆನಂದ ಪೂಜಾರಿ ಅಲ್ಲಂಗಾರು, ಸಂತೋಷ್ ಕುಲಾಲ್, ಸುಜಿತ್ ಕಡಮಾಜೆ ಸೇರಿದಂತೆ ಹಲವಾರು ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಶಾಸಕರಿಗೆ ವಿವರಣೆ ನೀಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









