ಉಪ್ಪಿನಂಗಡಿ : ಹಳೆಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಸರಣಿ ಕಳ್ಳತನದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಮಂಗಳೂರಿನ ಕಸಬಾ ಬೇಂಗ್ರೆ ನಿವಾಸಿಯಾದ ಅಕ್ರಂ ಅಲಿಯಾಸ್ ಬೋಜ ಅಕ್ರ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನ ವಿರುದ್ಧ 2015 ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನ ಮತ್ತು ರಾತ್ರಿ ವೇಳೆ ಕಳವು ಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಸಂಖ್ಯೆ 158/2015 ರಡಿ ಐಪಿಸಿ ಕಲಂ 457 ಹಾಗೂ 380 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೇಸಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಹಾಜರಾಗದೆ ಆರೋಪಿ ಕಳೆದ 7 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದನು.
ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದ ಉಪ್ಪಿನಂಗಡಿ ಠಾಣೆಯ ತನಿಖಾ ವಿಭಾಗದ ಉಪನಿರೀಕ್ಷಕರಾದ (ಪಿಎಸ್ಐ) ಕೌಶೀಕ್ ಬಿಸಿ, ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೆಬಲ್ ಶಿವರಾಮ್ ರೈ ಹಾಗೂ ಕಾನ್ಸ್ಟೆಬಲ್ ಮಹದೇವ ಅವರನ್ನೊಳಗೊಂಡ ವಿಶೇಷ ಪೊಲೀಸ್ ತಂಡವು ಮೇ 22, 2026 ರಂದು ಮಂಗಳೂರಿನ ಪಣಂಬೂರು ಎಂಬಲ್ಲಿ ಕಾರ್ಯಾಚರಣೆ ನಡೆಸಿ ಈತನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಪೊಲೀಸ್ ದಾಖಲೆಗಳ ಪ್ರಕಾರ, ಸೆರೆಸಿಕ್ಕ ಈ ಆರೋಪಿಯ ವಿರುದ್ಧ ಈಗಾಗಲೇ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಂದು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









