ಮಂಗಳೂರು : ಕಳೆದ ಹತ್ತು ವರ್ಷಗಳಿಂದ ಕಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿ ಕೋರ್ಟ್ ವಿಚಾರಣೆಗೆ ಗೈರಾಗುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚುತ್ತಿದ್ದ ಹಳೇ ಆರೋಪಿಯೊಬ್ಬನನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಂಪಾಡಿ ಕುಂತಲ್ಪಾಡಿ ನಿವಾಸಿಯಾದ ಉದಯ ಪೂಜಾರಿ ಎಂಬುವವರ ಪುತ್ರ ಪ್ರಸಾದ್ (33) ಎಂದು ಗುರುತಿಸಲಾಗಿದೆ. ನ್ಯಾಯಾಲಯದ ವಿಚಾರಣೆಯಿಂದ ನಿರಂತರವಾಗಿ ತಪ್ಪಿಸಿಕೊಳ್ಳುತ್ತಿದ್ದ ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾನೂನು ಪ್ರಕ್ರಿಯೆ ಮುಗಿಸಿ ನ್ಯಾಯಾಂಗದ ಮುಂದೆ ನಿಲ್ಲಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, 2016ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಸಾದ್ ವಿರುದ್ಧ ಅಪರಾಧ ಸಂಖ್ಯೆ 289/2016 ರನ್ವಯ ಐಪಿಸಿ ಸೆಕ್ಷನ್ 379ರ ಅಡಿಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಆದರೆ ಈತ ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಆರೋಪಿ ದೀರ್ಘಕಾಲದವರೆಗೆ ಪತ್ತೆಯಾಗದ ಕಾರಣ ಮತ್ತು ಕಾನೂನು ಪ್ರಕ್ರಿಯೆಗೆ ಸಿಗದೇ ಇದ್ದುದರಿಂದ ನ್ಯಾಯಾಲಯವು ಈತನ ವಿರುದ್ಧ ಎಲ್ಪಿಸಿ (Long Pending Case) ವಾರಂಟ್ ಜಾರಿಗೊಳಿಸಿತ್ತು.
ಪೊಲೀಸರು ಈತನ ಹಿನ್ನೆಲೆಯನ್ನು ಕೆದಕಿದಾಗ ಈತ ಕೇವಲ ಮಂಗಳೂರಿನಲ್ಲಿ ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಹಿರಿಯಡ್ಕ, ಮಣಿಪಾಲ ಹಾಗೂ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಕೊಣಾಜೆ ಪೊಲೀಸ್ ಠಾಣೆಗಳಲ್ಲೂ ಸಹ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಸುಮಾರು ಒಂದು ದಶಕದಿಂದ ತನಿಖಾಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಈತನನ್ನು ಜೂನ್ 24ರಂದು ಮಂಗಳೂರು ಉತ್ತರ ಠಾಣೆಯ ವಿಶೇಷ ಪೊಲೀಸ್ ತಂಡವು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಕೋರ್ಟ್ಗೆ ಹಾಜರುಪಡಿಸಲಾದ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










