ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಎಂಬಲ್ಲಿ ಭಾನುವಾರ ರಾತ್ರಿ (ಮೇ 31) ಕಾಡಾನೆಯೊಂದು ದ್ವಿಚಕ್ರ ವಾಹನದ ಮೇಲೆ ದಾಳಿ ನಡೆಸಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಒಂಟಿ ಸಲಗದ ಆಕ್ರೋಶಕ್ಕೆ ಸಿಲುಕಿ ಸ್ಕೂಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಿಡುಪೆಯ ನಿವಾಸಿಯಾದ ನೆಕ್ಕಿಲೊಟ್ಟು ನಾರಾಯಣ ಗೌಡ ಎಂಬವರು ಸ್ಥಳೀಯ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಗೆ ಮರಳುತ್ತಿದ್ದರು. ಅವರು ನೇಲ್ಯಡ್ಕ ರಸ್ತೆಯ ಸಮೀಪ ಚಲಿಸುತ್ತಿದ್ದಾಗ, ಘೋರ ಕತ್ತಲೆಯಲ್ಲಿ ಹಠಾತ್ತನೆ ಒಂಟಿ ಕಾಡಾನೆಯೊಂದು ರಸ್ತೆಗೆ ಬಂದಿದೆ. ಆನೆ ತೀರಾ ಹತ್ತಿರ ಬರುವವರೆಗೂ ಕತ್ತಲೆಯಿಂದಾಗಿ ಸವಾರನಿಗೆ ಅದರ ಉಪಸ್ಥಿತಿ ಅರಿವಾಗಿರಲಿಲ್ಲ.
ಏಕಾಏಕಿ ಆನೆ ಎದುರಾಗುತ್ತಿದ್ದಂತೆ ತೀವ್ರ ಆತಂಕಕ್ಕೊಳಗಾದ ನಾರಾಯಣ ಗೌಡರು, ತಡಮಾಡದೆ ಸ್ಕೂಟರ್ ಅನ್ನು ಅಲ್ಲೇ ಬಿಟ್ಟು ಕತ್ತಲೆಯಲ್ಲೇ ದೂರಕ್ಕೆ ಓಡಿ ಅಡಗಿಕೊಂಡಿದ್ದಾರೆ. ಸವಾರ ಕಣ್ಣೆದುರೇ ತಪ್ಪಿಸಿಕೊಳ್ಳುತ್ತಿದ್ದಂತೆ ಸಿಟ್ಟಿಗೆದ್ದ ಕಾಡಾನೆ, ರಸ್ತೆಯಲ್ಲಿದ್ದ ದ್ವಿಚಕ್ರ ವಾಹನವನ್ನು ತುಳಿದು ಜಖಂಗೊಳಿಸಿದೆ. ಸವಾರನ ಸಮಯಪ್ರಜ್ಞೆ ಹಾಗೂ ತ್ವರಿತ ನಿರ್ಧಾರದಿಂದಾಗಿ ಯಾವುದೇ ದೈಹಿಕ ಗಾಯಗಳಿಲ್ಲದೆ ದೊಡ್ಡ ಕಂಟಕವೊಂದು ತಪ್ಪಿದಂತಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









