ಮಂಗಳೂರು : ಹಣಕಾಸಿನ ತೊಂದರೆ ಸೇರಿದಂತೆ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ನವೀಕರಣ ಕಾರ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಮುಂಬರುವ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೆರವಿನೊಂದಿಗೆ ಜಿಲ್ಲೆಯ ಒಟ್ಟು 91 ಶಾಲೆಗಳು ಹಾಗೂ 137 ಅಂಗನವಾಡಿ ಕೇಂದ್ರಗಳನ್ನು ಸರಿಪಡಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಅಧಿಕೃತ ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕಾಗಿ ಅಂಗನವಾಡಿಗಳ ಜಿರ್ಣೋದ್ಧಾರಕ್ಕೆ 2.5 ಕೋಟಿ ರೂಪಾಯಿ ಹಾಗೂ ಶಾಲೆಗಳ ದುರಸ್ತಿಗಾಗಿ 1.5 ಕೋಟಿ ರೂಪಾಯಿಗಳ ತುರ್ತು ನಿಧಿಯನ್ನು ಮುಡಿಪಾಗಿಡಲಾಗಿದೆ.
ಮುಂದಿನ ದಿನಗಳಲ್ಲಿ ಸುರಿಯಲಿರುವ ಭಾರಿ ಮಳೆಯ ಸಂದರ್ಭದಲ್ಲಿ ಬೇರೆ ಯಾವುದೇ ಶಾಲಾ-ಕಾಲೇಜುಗಳು, ಅಂಗನವಾಡಿಗಳು ಅಥವಾ ಆರೋಗ್ಯ ಕೇಂದ್ರಗಳು ಹಾನಿಗೊಳಗಾದರೆ, ಅವುಗಳ ತಕ್ಷಣದ ದುರಸ್ತಿಗೂ ಹೆಚ್ಚುವರಿ ಹಣ ಬಿಡುಗಡೆ ಮಾಡಲು ಜಿಲ್ಲಾಡಳಿತ ಸಿದ್ಧವಿದೆ. ಈ ನಡುವೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಪ್ರಾಣರಕ್ಷಣೆಗೆ ಗರಿಷ್ಠ ಮಹತ್ವ ನೀಡಲಾಗಿದ್ದು, ತೀವ್ರವಾಗಿ ಜರ್ಜರಿತಗೊಂಡಿರುವ ಅಥವಾ ಕುಸಿಯುವ ಹಂತದಲ್ಲಿರುವ ಯಾವುದೇ ಕಟ್ಟಡಗಳನ್ನು ಬಳಸದಂತೆ ಹಾಗೂ ಅಲ್ಲಿ ಜನರನ್ನು ಸೇರಿಸದಂತೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ರವಾನಿಸಲಾಗಿದೆ.
ಇದಲ್ಲದೆ, ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲೂ ಅಪಾಯದ ಮುನ್ಸೂಚನೆ ನೀಡುತ್ತಿರುವ ಹಾಗೂ ದುಸ್ಥಿತಿಯಲ್ಲಿರುವ ಇಂತಹ ಸರ್ಕಾರಿ ಕಟ್ಟಡಗಳನ್ನು ಕೂಡಲೇ ಗುರುತಿಸಿ, ಅವುಗಳ ಸಮಗ್ರ ಮಾಹಿತಿಯನ್ನು ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಕಟು ಸೂಚನೆ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









