ಮಂಗಳೂರು : ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯಾಪಾರ ವಲಯಗಳನ್ನು (ವೆಂಡಿಂಗ್ ಜೋನ್ಸ್) ನಿಗದಿಪಡಿಸುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಆಮ್ ಆದ್ಮ ಪಾರ್ಟಿ (ಎಎಪಿ) ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಈ ಕುರಿತು ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಎಎಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳು, ಪಾಲಿಕೆಯ ಬೇಜವಾಬ್ದಾರಿ ಧೋರಣೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ಇತ್ತೀಚೆಗೆ ಪುರಭವನದ ಬಳಿ ನಡೆದ ಅನಧಿಕೃತ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ಪ್ರಸ್ತಾಪಿಸಿದ ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಅಲ್ಲಿ ಉದ್ಭವಿಸಿದ್ದ ನೈರ್ಮಲ್ಯದ ಕೊರತೆ, ಫುಟ್ಪಾತ್ ಅತಿಕ್ರಮಣ ಮತ್ತು ಮಹಿಳೆಯರ ಸುರಕ್ಷತೆಯ ಸಮಸ್ಯೆಗಳಿಗೆ ಪಾಲಿಕೆಯ ನಿಷ್ಕ್ರಿಯತೆಯೇ ಕಾರಣ ಎಂದರು. ಕೇವಲ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದು ನಗರದ ಬಡವರ ಬದುಕನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗದ ಪಾಲಿಕೆಯ ಆಡಳಿತಾತ್ಮಕ ಸೋಲನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಬೀದಿ ಬದಿ ವ್ಯಾಪಾರಿಗಳು ನಗರದ ಆರ್ಥಿಕತೆಯ ಅತಿ ಮುಖ್ಯ ಭಾಗವಾಗಿದ್ದು, ಇವರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೂಡ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಮಂಗಳೂರು ಪಾಲಿಕೆಯು ಇವರಿಗಾಗಿ ನಿರ್ದಿಷ್ಟ ಜಾಗಗಳನ್ನು ಕಲ್ಪಿಸದೆ ಇರುವುದರಿಂದ, ಶ್ರಮಜೀವಿಗಳ ದೈನಂದಿನ ಸಂಪಾದನೆಗೆ ಸಂಚಕಾರ ಬಂದಿದೆ. ಅಧಿಕಾರಿಗಳ ಕೆಂಪು ಪಟ್ಟಿ ಮತ್ತು ಅಸಮರ್ಥತೆಯಿಂದಾಗಿ ಬಡವರ ಹಕ್ಕುಗಳು ಹತ್ತಿಕ್ಕಲ್ಪಡುತ್ತಿವೆ ಎಂದು ಸಾಲಿನ್ಸ್ ಬೇಸರ ವ್ಯಕ್ತಪಡಿಸಿದರು.
ನಿಯಮಾವಳಿಗಳ ಪ್ರಕಾರ ವ್ಯಾಪಾರ ವಲಯಗಳನ್ನು ಗುರುತಿಸಿ, ಬಯೋಮೆಟ್ರಿಕ್ ಪರವಾನಗಿ ನೀಡಲು ಸ್ಪಷ್ಟ ಕಾನೂನಿದ್ದರೂ ಸ್ಥಳೀಯ ಆಡಳಿತ ಅದನ್ನು ನೆನೆಗುದಿಗೆ ತಳ್ಳಿದೆ. ಇದರಿಂದಾಗಿ ಅರ್ಹ ವ್ಯಾಪಾರಿಗಳಿಗೆ ಸಿಗಬೇಕಾದ ಕೇಂದ್ರ ಸರ್ಕಾರದ ಹಣಕಾಸು ನೆರವುಗಳು ಕೂಡ ತಲುಪುತ್ತಿಲ್ಲ. ಆದ್ದರಿಂದ ಪಾಲಿಕೆಯು ತಕ್ಷಣವೇ ಎಚ್ಚೆತ್ತುಕೊಂಡು, ಅರ್ಹ ವ್ಯಾಪಾರಿಗಳನ್ನು ಗುರುತಿಸಿ ವಿಳಂಬವಿಲ್ಲದೆ ಲೈಸೆನ್ಸ್ ನೀಡಬೇಕು ಹಾಗೂ ಪ್ರತ್ಯೇಕ ವಲಯಗಳನ್ನು ಸ್ಥಾಪಿಸಬೇಕು ಎಂದು ಪಕ್ಷವು ಆಗ್ರಹಿಸಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಎಎಪಿ ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮುದ್ರಾಡಿ, ಜಿಲ್ಲಾ ಕಾರ್ಯದರ್ಶಿಗಳಾದ ಕಬೀರ್ ಕಾಟಿಪಳ್ಳ, ವಾಸುದೇವ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಎಲ್. ಪಿಂಟೊ ಹಾಗೂ ಪ್ರಮುಖರಾದ ಶಾಲಟ್ ಪಿಂಟೊ ಮತ್ತು ಸುಜಾತ ಯತೀಶ್ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









