ಮಂಗಳೂರು : ಹಲವು ವರ್ಷಗಳಿಂದ ಕಳವು ಸೇರಿದಂತೆ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿ, ಕಾನೂನಿನ ಕಣ್ಣಿಗೆ ಮಣ್ಣೆರಚಿ ಅಲೆದಾಡುತ್ತಿದ್ದ ಪುತ್ತೂರಿನ ಮೋಸ್ಟ್ ವಾಂಟೆಡ್ ಅಪರಾಧಿಯೊಬ್ಬನನ್ನು ವಿಟ್ಲ ಪೊಲೀಸರು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಪುತ್ತೂರು ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ (ಜೂನ್ 16) ಹೊಂಚು ಹಾಕಿದ ವಿಶೇಷ ಪೊಲೀಸ್ ತಂಡ, ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಈ ಕುಖ್ಯಾತನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಅಸಾಮಿಯನ್ನು ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಮೂಲದ ಮೊಹಮ್ಮದ್ ಸಲಾಂ ಅಲಿಯಾಸ್ ಕೆ. ಎಂ. ಸಲಾಂ ಎಂದು ಗುರುತಿಸಲಾಗಿದ್ದು, ಈತ ಅಪರಾಧ ಲೋಕದಲ್ಲಿ ‘ಡಾಲರ್ ಸಲಾಂ’ ಎಂದೇ ಹೆಸರುವಾಸಿಯಾಗಿದ್ದನು. ಈತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ 2020 ಮತ್ತು 2022 ರ ಸಾಲಿನಲ್ಲಿ ಸರಣಿ ಮನೆಗಳ್ಳತನ ಹಾಗೂ ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಹಿಂದೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ಬೇಲ್ ಮೇಲೆ ಹೊರಬಂದಿದ್ದ ಈತ, ತದನಂತರ ನ್ಯಾಯಾಲಯದ ಯಾವುದೇ ವಿಚಾರಣೆಗೂ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಕೋರ್ಟ್ ಈತನ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿತ್ತು.
ಕೇವಲ ಕಳವು ಮಾತ್ರವಲ್ಲದೆ, ಈತನ ಅತಿರೇಕದ ವರ್ತನೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲೂ ದಾಖಲಾಗಿತ್ತು. 2023 ರಲ್ಲಿ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಕೆಲಸಕ್ಕೆ ಅಡ್ಡಿಪಡಿಸಿ, ಪ್ರಾಣ ಬೆದರಿಕೆ ಹಾಕಿದ ಗಂಭೀರ ಆರೋಪ ಕೂಡ ಈತನ ಮೇಲಿತ್ತು. ಈ ಕೇಸಿನಲ್ಲೂ ನ್ಯಾಯಾಲಯದ ಸಮನ್ಸ್ಗೆ ಕ್ಯಾರೆ ಎನ್ನದ ಕಾರಣ ಪುತ್ತೂರು ನ್ಯಾಯಾಲಯ ಕೂಡ ಈತನ ಪತ್ತೆಗೆ ವಾರೆಂಟ್ ಜಾರಿ ಮಾಡಿತ್ತು.
ಕೊನೆಗೂ ಈತನ ಚಲನವಲನದ ಬಗ್ಗೆ ಖಚಿತ ಸುಳಿವು ಪಡೆದ ವಿಟ್ಲ ಉಪನಿರೀಕ್ಷಕರು ಹಾಗೂ ಅವರ ದಕ್ಷ ಸಿಬ್ಬಂದಿಗಳ ತಂಡ ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿ, ರೈಲ್ವೆ ನಿಲ್ದಾಣದ ಬಳಿ ಈತನನ್ನು ವಶಕ್ಕೆ ಪಡೆದಿದೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ‘ಡಾಲರ್ ಸಲಾಂ’ಗೆ ಕಂಬಿ ಎಣಿಸಲು ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಅಪರಾಧ, ಟಾಪ್ ಸುದ್ದಿ, ಸುದ್ದಿಗಳು









