ಸುರತ್ಕಲ್ : ಗುಡ್ಡೆಕೊಪ್ಲ ಕಡಲತೀರದಲ್ಲಿ ದೀರ್ಘಕಾಲದಿಂದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಬೃಹತ್ ಹಡಗು “ಭಗವತಿ ಪ್ರೇಮ್” ಇನ್ನು ಇತಿಹಾಸದ ಪುಟ ಸೇರಲಿದೆ. ಕಳೆದ ಕೆಲವು ವರ್ಷಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದ ಈ ದೈತ್ಯ ಡ್ರೆಡ್ಡರ್ ಅನ್ನು ಸ್ಥಳದಲ್ಲೇ ಸ್ಕ್ರ್ಯಾಪ್ ಮಾಡುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ಇದರೊಂದಿಗೆ ಈ ಭಾಗದ ಅತ್ಯಂತ ಜನಪ್ರಿಯ ಸೆಲ್ಫಿ ಪಾಯಿಂಟ್ ಸಾರ್ವಜನಿಕರ ಕಣ್ಣಿನಿಂದ ಮರೆಯಾಗುತ್ತಿದೆ.
ಹಲವು ವರ್ಷಗಳ ಹಿಂದೆ ಮುಂಗಾರಿನ ತೀವ್ರ ಗಾಳಿ-ಮಳೆಗೆ ಸಿಲುಕಿ ಎನ್ಎಂಪಿಟಿ ಬಂದರಿನಿಂದ ನಿಯಂತ್ರಣ ಕಳೆದುಕೊಂಡಿದ್ದ ಈ ಹೂಳೆತ್ತುವ ಹಡಗು, ಆ್ಯಂಕರ್ ತುಂಡಾಗಿ ಗುಡ್ಡೆಕೊಪ್ಲ ತೀರಕ್ಕೆ ಬಂದು ಆಶ್ರಯ ಪಡೆದಿತ್ತು. ಸಮುದ್ರದ ರೌದ್ರಾವತಾರಕ್ಕೆ ಸಿಲುಕಿ ತಾಂತ್ರಿಕವಾಗಿ ಸಂಪೂರ್ಣ ಹಾನಿಗೊಳಗಾಗಿದ್ದರಿಂದ, ಇದನ್ನು ಮರಳಿ ಆಳ ಸಮುದ್ರಕ್ಕೆ ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ. ಆದರೆ, ಅನಿರೀಕ್ಷಿತವಾಗಿ ಕರಾವಳಿ ತೀರ ಸೇರಿದ ಈ ಹಡಗು ಅತಿ ಶೀಘ್ರದಲ್ಲೇ ಸ್ಥಳೀಯರು ಹಾಗೂ ಪ್ರವಾಸಿಗರ ಪಾಲಿಗೆ ಒಂದು ಪ್ರಮುಖ ಪ್ರವಾಸಿ ತಾಣವಾಗಿ ರೂಪಾಂತರಗೊಂಡಿತ್ತು.
ಕಡಲದಡದ ಮರಳಿನಲ್ಲಿ ಹೂತುಹೋಗಿದ್ದ ಈ ಬೃಹತ್ ದೃಶ್ಯವನ್ನು ಕಣ್ಣುಂಬಿಕೊಳ್ಳಲು ನಿತ್ಯ ನೂರಾರು ಸಂದರ್ಶಕರು ಇಲ್ಲಿಗೆ ಲಗ್ಗೆ ಇಡುತ್ತಿದ್ದರು. ವೀಕೆಂಡ್ ದಿನಗಳಲ್ಲಿ ಕುಟುಂಬಸ್ಥರು ಮಕ್ಕಳೊಂದಿಗೆ ಬಂದು ಕಾಲ ಕಳೆಯುವ, ಹಡಗಿನ ಹಿನ್ನೆಲೆಯಲ್ಲಿ ಸುಂದರವಾದ ಚಿತ್ರಗಳನ್ನು ಹಾಗೂ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿದ್ದವು. ಹಿರಿಯ ನಾಗರಿಕರ ಸಂಜೆಯ ವಾಯುವಿಹಾರಕ್ಕೆ ಹಾಗೂ ಹೊರಗಿನಿಂದ ಬರುವ ಪ್ರವಾಸಿಗರಿಗೆ ಇದೊಂದು ಅತ್ಯುತ್ತಮ ಹೆಗ್ಗುರುತಾಗಿ ಗುರುತಿಸಿಕೊಂಡಿತ್ತು.
ಇನ್ನೊಂದೆಡೆ, ಈ ಬೃಹತ್ ಹಡಗಿನ ಉಪಸ್ಥಿತಿಯಿಂದಾಗಿ ಸ್ಥಳೀಯ ಮೀನುಗಾರಿಕಾ ಚಟುವಟಿಕೆಗಳಿಗೆ ಅಡಚಣೆಯಾಗುತ್ತಿದೆ ಮತ್ತು ಪರಿಸರ ಮಾಲಿನ್ಯದ ಭೀತಿ ಎದುರಾಗಿದೆ ಎಂದು ಮೀನುಗಾರರು ಹಾಗೂ ಸ್ಥಳೀಯ ನಿವಾಸಿಗಳು ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಿದ್ದರು. ಹಡಗಿನಿಂದ ಉಂಟಾಗುತ್ತಿದ್ದ ಸಮಸ್ಯೆಗಳ ಕುರಿತು ಸಾರ್ವಜನಿಕ ವಲಯದಲ್ಲಿ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಬಂದರು ಇಲಾಖೆಯು ಇತ್ತೀಚೆಗೆ ಈ ಹಡಗನ್ನು ಸಂಪೂರ್ಣವಾಗಿ ಒಡೆದು ತೆರವುಗೊಳಿಸಲು ಗುತ್ತಿಗೆ ನೀಡಿ ಆದೇಶಿಸಿತ್ತು.
ಪ್ರಸ್ತುತ ಸಮುದ್ರದ ಅಲೆಗಳ ತೀವ್ರತೆ ಕಡಿಮೆಯಿರುವ ಪೂರಕ ವಾತಾವರಣವನ್ನು ಬಳಸಿಕೊಂಡು ಹಡಗನ್ನು ಕತ್ತರಿಸುವ ಕೆಲಸ ಭರದಿಂದ ಸಾಗುತ್ತಿದೆ. ನುರಿತ ತಾಂತ್ರಿಕ ಕಾರ್ಮಿಕರು ಗ್ಯಾಸ್ ಕಟರ್ಗಳನ್ನು ಉಪಯೋಗಿಸಿ ದೈತ್ಯ ಕಬ್ಬಿಣದ ಭಾಗಗಳನ್ನು ಹಂತ ಹಂತವಾಗಿ ಬೇರ್ಪಡಿಸುತ್ತಿದ್ದಾರೆ. ತೈಲ ಸೋರಿಕೆಯಾಗದಂತೆ ಹಾಗೂ ಸಮುದ್ರದ ನೀರು ಕಲುಷಿತಗೊಳ್ಳದಂತೆ ಗುತ್ತಿಗೆದಾರರು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಕಟ್ಟುನಿಟ್ಟಿನ ಪರಿಸರ ನಿಯಮಗಳ ಅಡಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









