ಉಡುಪಿ : ಶಂಕರಪುರ ಸಮೀಪದ ಕುರ್ಕಾಲ್ನಲ್ಲಿರುವ ಇಂಧನ ಬಂಕ್ ಒಂದರಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಡೀಸೆಲ್ ತುಂಬಿಸಿಕೊಂಡು, ಬಿಲ್ ಪಾವತಿಸದೆ ಕಾರಿನಲ್ಲಿ ಪರಾರಿಯಾಗಿದ್ದ ಮೂವರು ಯುವಕರನ್ನು ಶಿರ್ವ ಪೊಲೀಸರು ರಾಜಧಾನಿ ಬೆಂಗಳೂರಿನಲ್ಲಿ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಶಿರ್ವ ನಿವಾಸಿಗಳಾದ ಮೊಹಮ್ಮದ್ ರಿಯಾಝ್ (26), ಮೊಹಮ್ಮದ್ ಅಫ್ರಾಝ್ (23) ಹಾಗೂ ಉಡುಪಿ ಅಂಬಾಗಿಲಿನ ಆಶಿಲ್ (21) ಎಂದು ಗುರುತಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೂನ್ 27ರಂದು ರಾತ್ರಿ ಸುಭಾಷ್ ನಗರದ ಬಂಕ್ಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ಈ ಯುವಕರು, ಬಂಕ್ ಸಿಬ್ಬಂದಿ ಶಶಾಂಕ್ ಎಂಬುವವರ ಬಳಿ 4,711 ರೂಪಾಯಿ ಮೌಲ್ಯದ ಡೀಸೆಲ್ ಹಾಕಿಸಿಕೊಂಡಿದ್ದರು. ಆ ಬಳಿಕ ಸಿಬ್ಬಂದಿ ಹಣ ಪಾವತಿಗಾಗಿ ಕ್ಯೂಆರ್ (QR) ಕೋಡ್ ತೋರಿಸಿದಾಗ, ಅದನ್ನು ಸ್ಕ್ಯಾನ್ ಮಾಡುವಂತೆ ನಟಿಸಿ ಬಿಲ್ ನೀಡುವಂತೆ ಕೇಳಿದ್ದಾರೆ. ಸಿಬ್ಬಂದಿ ಬಿಲ್ ಪ್ರಿಂಟ್ ತೆಗೆಯುವಷ್ಟರಲ್ಲಿ, ಹಣ ಪಾವತಿಸದ ಮುದ್ರಾಡ classy ಗ್ಯಾಂಗ್ ಕ್ಷಣಾರ್ಧದಲ್ಲಿ ಕಾರು ಚಲಾಯಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿತ್ತು. ಈ ಬಗ್ಗೆ ಬಂಕ್ ಉಸ್ತುವಾರಿ ಆಶಿಶ್ ನೀಡಿದ ದೂರಿನನ್ವಯ ಶಿರ್ವ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾರ್ಕಳ ಡಿವೈಎಸ್ಪಿ ವಿಜಯ್ ಪ್ರಸಾದ್ ಹಾಗೂ ಕಾಪು ಇನ್ಸ್ಪೆಕ್ಟರ್ ಅಜ್ಮತ್ ಅಲಿ ಮಾರ್ಗದರ್ಶನದಲ್ಲಿ, ಶಿರ್ವ ಪಿಎಸ್ಐ ಮಂಜುನಾಥ ಮರಬದ ನೇತೃತ್ವದ ವಿಶೇಷ ಪೊಲೀಸ್ ತಂಡ ತಾಂತ್ರಿಕ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಿರುವ ಪೊಲೀಸರು, ಈ ಖದೀಮರು ಇದೇ ರೀತಿ ರಾಜ್ಯದ ಇತರೆ ಪೆಟ್ರೋಲ್ ಪಂಪ್ಗಳಿಗೂ ಚೂನಾ ಹಾಕಿದ್ದಾರೆಯೇ ಎಂಬ ನಿಟ್ಟಿನಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










