ಉಡುಪಿ : ಬ್ರಹ್ಮಾವರ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿಯೊಬ್ಬನನ್ನು ಬಸ್ ನಿಲ್ದಾಣದಿಂದಲೇ ಅಪಹರಿಸಿ, ಕೇರಳಕ್ಕೆ ಕರೆದೊಯ್ದು ಬಲವಂತವಾಗಿ ದುಡಿಸಿಕೊಂಡು ದೌರ್ಜನ್ಯ ಎಸಗಿದ್ದ ಇಬ್ಬರು ಯುವಕರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ವಾರಂಬಳ್ಳಿ ಸಾಲಿಕೇರಿಯ ವಿಖ್ಯಾತ್ ಆಚಾರ್ಯ (19) ಹಾಗೂ ಮಟಪಾಡಿಯ ಸುಚಿತ್ ನಾಯಕ್ (20) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಜೂನ್ 1ರಂದು ಬೆಳಿಗ್ಗೆ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಇದ್ದ ಮಟಪಾಡಿ ಗ್ರಾಮದ ಬಾಲಕನನ್ನು ಬಲಾತ್ಕಾರವಾಗಿ ಎತ್ತಿಕೊಂಡು ಕೇರಳದ ತಲಪಾಡಿ ಕುಂಜತ್ತೂರು ಪದವು ಎಂಬಲ್ಲಿಗೆ ಸಾಗಿಸಿದ್ದರು.
ಅಲ್ಲಿಗೆ ತಲುಪಿದ ಬಳಿಕ ಆರೋಪಿಗಳು ಬಾಲಕನನ್ನು ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮರದ ಮಿಲ್ (ವುಡ್ ಕಂಪೆನಿ) ಒಂದಕ್ಕೆ ಕೆಲಸಕ್ಕೆ ಸೇರಿಸಿದ್ದರು. ಕೆಲ ದಿನಗಳ ನಂತರ ನೊಂದ ಬಾಲಕ ತನಗೆ ಕೆಲಸ ಸಾಕು, ತನ್ನೂರಿಗೆ ಹಾಗೂ ಮನೆಗೆ ಹೋಗಬೇಕೆಂದು ಹಠ ಹಿಡಿದಾಗ ಆರೋಪಿಗಳು ಕ್ರೌರ್ಯ ಮೆರೆದಿದ್ದಾರೆ. ಜೂನ್ 9ರಂದು ತಾವು ತಂಗಿದ್ದ ಕೋಣೆಯಲ್ಲಿ ಸುಚಿತ್ ಬಾಲಕನಿಗೆ ಮನಬಂದಂತೆ ಜಜ್ಜಿದ್ದರೆ, ವಿಖ್ಯಾತ್ ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ, ಈ ಭೀಕರ ಕೃತ್ಯವನ್ನು ಮತ್ತೊಬ್ಬ ಆರೋಪಿ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಎಂದು ಬಾಲಕನ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಗ ನಾಪತ್ತೆಯಾದ ಹಾಗೂ ಆತನ ಮೇಲಾದ ದೌರ್ಜನ್ಯದ ಬಗ್ಗೆ ಬಾಲಕನ ತಂದೆ ನೀಡಿದ ಗಂಭೀರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ಠಾಣಾ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಕಟಕಟೆಗೆ ತಳ್ಳಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಂಡಿದ್ದಾರೆ. ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಮೂರನೇ ಆರೋಪಿ ಅಪ್ರಾಪ್ತನಾಗಿದ್ದರಿಂದ (ಬಾಲಾಪರಾಧಿ), ಆತನನ್ನು ಕಾನೂನಿನ ನಿಯಮಾವಳಿಗಳ ಪ್ರಕಾರ ಬಾಲ ನ್ಯಾಯ ಮಂಡಳಿಯ (JJB) ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










