ಉಳ್ಳಾಲ : ಉಚ್ಚಿಲ ನಯಾಪಟ್ಣ ಎಂಬಲ್ಲಿ ಟ್ರಾನ್ಸ್ಫಾರ್ಮರ್ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದ ವೇಳೆ ಮೆಸ್ಕಾಂ ಲೈನ್ಮ್ಯಾನ್ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದಾರುಣ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಪಿಲ್ಲಾರು ಅಂಬಿಕಾ ರಸ್ತೆ ನಿವಾಸಿ ಶೇಖ್ ಜಮೀರ್ (49) ಮೃತಪಟ್ಟ ಅಭಾಗ್ಯ ಸಿಬ್ಬಂದಿ.
ಉಚ್ಚಿಲ ನಾಯಪಟ್ಟಣ ಪ್ರದೇಶದ ಟ್ರಾನ್ಸ್ಫಾರ್ಮರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮೆಸ್ಕಾಂಗೆ ದೂರು ನೀಡಲಾಗಿತ್ತು. ದೂರು ಆಧರಿಸಿ ಶೇಖ್ ಜಮೀರ್ ತಮ್ಮ ಸಹೋದ್ಯೋಗಿ ಸಂಗಪ್ಪ ಅವರೊಂದಿಗೆ ಸ್ಥಳಕ್ಕೆ ತೆರಳಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದರು.
ಕಾರ್ಯನಿರ್ವಹಿಸುವ ಮುನ್ನ GOS (ಗ್ರೂಪ್ ಆಪರೇಟೆಡ್ ಸ್ವಿಚ್) ಕಡಿತಗೊಂಡಿದೆ ಎಂದು ಭಾವಿಸಿ ಜಮೀರ್ ಅವರು ಟ್ರಾನ್ಸ್ಫಾರ್ಮರ್ ಏರಿದ್ದರು. ಆದರೆ, ವಿದ್ಯುತ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳ್ಳದ ಕಾರಣ ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿ ಮೇಲಿಂದ ಕೆಳಗೆ ಬಿದ್ದಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದರು. ಮೃತರು ಪತ್ನಿ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, Uncategorized, ಟಾಪ್ ಸುದ್ದಿ, ಸುದ್ದಿಗಳು









