ಮಂಗಳೂರು : ಶನಿವಾರ ರಾತ್ರಿ ಮಂಗಳೂರಿನ ನಂತೂರು ತಾರಾಯಿತೋಟ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಎರಡು ಕುಟುಂಬಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅತಿ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ತಪ್ಪಿ ಟಿಪ್ಪರ್ಗೆ ಅಪ್ಪಳಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಧರ್ಮಸ್ಥಳದ ಕಾರ್ಯತಡ್ಕ ನಿವಾಸಿ ಗೋಪಾಲಕೃಷ್ಣ (27) ಎಂದು ಗುರುತಿಸಲಾಗಿದೆ. ಈತ ಗುರುಪುರದಲ್ಲಿ ಚಿಪ್ಸ್ ತಯಾರಿಕಾ ಘಟಕದಲ್ಲಿ ಕೆಲಸ ಮುಗಿಸಿ ತನ್ನ ಬಾಡಿಗೆ ಕೋಣೆಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಈ ಅಪಘಾತದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ನಾಗುರಿಯ ಹಿರಿಯ ಛಾಯಾಗ್ರಾಹಕ ಮೋಹನ್ ರಾಜ್ (64) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಅವರು ಸದ್ಯ ಕಂಕನಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವಿಶೇಷವೆಂದರೆ, ಮೋಹನ್ ರಾಜ್ ಅವರು ಮೇ 10 ರಂದು ನಡೆಯಬೇಕಿದ್ದ ಮಗಳ ಮದುವೆಯ ತಯಾರಿಯಲ್ಲಿ ತೊಡಗಿದ್ದರು. ಇಡೀ ಅಪಘಾತದ ದೃಶ್ಯವು ಹಿಂದಿನಿಂದ ಬರುತ್ತಿದ್ದ ಟೆಂಪೋದ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆನಡುಗಿಸುವಂತಿದೆ.
ಅಪಘಾತದ ತಕ್ಷಣವೇ ಟೆಂಪೋ ಚಾಲಕ ಗಂಗಾಧರ್ ಅಂಬ್ಲಮೊಗರು ಅವರು ಗಾಯಾಳು ಮೋಹನ್ ರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಘಟನೆಯ ಅರಿವಿಲ್ಲದೆ ಮುಂದೆ ಸಾಗಿದ್ದ ಟಿಪ್ಪರ್ ಚಾಲಕನನ್ನು ಗಂಗಾಧರ್ ನೀಡಿದ ಮಾಹಿತಿಯ ಆಧಾರದ ಮೇಲೆ ಕದ್ರಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಗೋಪಾಲಕೃಷ್ಣನ ತಂದೆ ಈಗಾಗಲೇ ಮೃತಪಟ್ಟಿದ್ದು, ಅನಾರೋಗ್ಯ ಪೀಡಿತ ತಾಯಿಗೆ ಆಧಾರವಾಗಿದ್ದ ಮಗನ ಸಾವಿನಿಂದ ಕುಟುಂಬ ಅನಾಥವಾಗಿದೆ. ಯುವಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಈ ಘೋರ ದುರಂತಕ್ಕೆ ಕಾರಣವೆಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









