ಕಾಪು ತಾಲೂಕಿನ ಪಣಿಯೂರು ಎಂಬಲ್ಲಿ ಸ್ಕೂಟರ್ ಮತ್ತು ನೀರಿನ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ದುರಂತವಾಗಿ ಸಾವನ್ನಪ್ಪಿದ್ದಾರೆ. ಪಣಿಯೂರು ಕೇಂದ್ರದ ನಿವಾಸಿಯಾದ ಕೃಷ್ಣ ಮೂಲ್ಯ (22) ಎಂಬವರೇ ಮೃತಪಟ್ಟ ದುರ್ದೈವಿ ಯುವಕರಾಗಿದ್ದಾರೆ. ಇವರು ಎಂದಿನಂತೆ ತಮ್ಮ ಸ್ಕೂಟರ್ನಲ್ಲಿ ಹಾಲು ಖರೀದಿಸಲು ಅಂಗಡಿಗೆ ಹೋಗಿ, ಮರಳಿ ಮನೆಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಯುವಕ ಪಣಿಯೂರಿನ ಕಂಚುಗರ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಆತನ ಮುಂದೆ ಸಾಗುತ್ತಿದ್ದ ನೀರಿನ ಟ್ಯಾಂಕರ್ ಒಮ್ಮಿಂದೊಮ್ಮೆಗೆ ಬಲಕ್ಕೆ ತಿರುವು ಪಡೆದುಕೊಂಡಿದೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ನೇರವಾಗಿ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರ ಕೃಷ್ಣ ಮೂಲ್ಯ ರಸ್ತೆಗೆ ಎಸೆಯಲ್ಪಟ್ಟು, ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ನಿವಾಸಿಗಳು, ಜಲಾಲುದ್ದೀನ್ ಅವರ ನೇತೃತ್ವದಲ್ಲಿ ಎಸ್ಡಿಪಿಐ ಆಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಉಚ್ಚಿಲ ಮಾರ್ಗವಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









