ಮಂಗಳೂರು : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈ ಬಾರಿಯ ನಾಗರ ಪಂಚಮಿ ಹಬ್ಬವನ್ನು ಪ್ರಕೃತಿ ಸಂರಕ್ಷಣೆಯ ಉದ್ದೇಶದಿಂದ “ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಮುಕ್ತ ನಾಗರ ಪಂಚಮಿ”ಯನ್ನಾಗಿ ಆಚರಿಸಲು ವ್ಯಾಪಕ ಸಿದ್ಧತೆ ನಡೆಸಲಾಗಿದೆ. ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ನಗರಪಾಲಿಕೆ ವಿನಂತಿಸಿದೆ. ಪೂಜೆ ಹಾಗೂ ಹಬ್ಬದ ಆಚರಣೆಯ ವೇಳೆ ಪ್ಲಾಸ್ಟಿಕ್ ಚೀಲಗಳು, ತಟ್ಟೆಗಳು ಮತ್ತು ಲೋಟಗಳ ಬದಲಿಗೆ ಬಟ್ಟೆ ಚೀಲಗಳು, ಸೆಣಬಿನ ಚೀಲಗಳು, ಬಾಳೆ ಎಲೆ, ಅಡಿಕೆ ಹಾಳೆ ಹಾಗೂ ಸ್ಟೀಲ್ ಪಾತ್ರೆಗಳಂತಹ ಮರುಬಳಕೆ ಮಾಡಬಹುದಾದ ಪ್ರಕೃತಿ ಸ್ನೇಹಿ ವಸ್ತುಗಳನ್ನೇ ಬಳಸಲು ಸೂಚಿಸಲಾಗಿದೆ.
ಪೂಜಾ ಸಾಮಗ್ರಿಗಳಾದ ಹಾಲು, ಹೂವು, ಎಣ್ಣೆ, ಅರಶಿನ ಹುಡಿ ಹಾಗೂ ಸೀಯಾಳಗಳನ್ನು ತರಲು ಪ್ಲಾಸ್ಟಿಕ್ ಚೀಲಗಳು ಅಥವಾ ಪ್ಲಾಸ್ಟಿಕ್ ಬಾಟಲಿಗಳ ಬದಲು ಮರುಬಳಕೆಯ ಪಾತ್ರೆ ಹಾಗೂ ಸೆಣಬಿನ ಚೀಲಗಳನ್ನು ಬಳಸಬೇಕು. ಆಚರಣೆಯ ಭಾಗವಾಗಿ ಕೃತಕ ಹಾಗೂ ನಿಷೇಧಿತ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ಸಂಪೂರ್ಣವಾಗಿ ತಪ್ಪಿಸಿ, ಮಾವಿನ ತೋರಣ, ಬಾಳೆಕಂಬ ಮತ್ತು ನೈಸರ್ಗಿಕ ಹೂವಿನ ಹಾರಗಳಿಂದ ಶೃಂಗರಿಸಲು ಕೋರಲಾಗಿದೆ. ಹಾಗೆಯೇ ರಂಗೋಲಿ ಬಿಡಿಸುವಾಗ ರಾಸಾಯನಿಕ ಬಣ್ಣಗಳ ಬದಲು ಪ್ರಕೃತಿದತ್ತ ಬಣ್ಣಗಳು ಅಥವಾ ಹೂವಿನ ದಳಗಳನ್ನು ಬಳಸಲು ತಿಳಿಸಲಾಗಿದ್ದು, ಪ್ರಸಾದ ವಿತರಣೆಗೆ ಬಟ್ಟೆ ಚೀಲ ಅಥವಾ ಪೇಪರ್ ಕವರ್ಗಳನ್ನೇ ಉಪಯೋಗಿಸುವಂತೆ ಮಾರ್ಗದರ್ಶನ ನೀಡಲಾಗಿದೆ.
ದೇವಸ್ಥಾನಗಳು ಹಾಗೂ ನಾಗಬನಗಳ ಆವರಣದಲ್ಲಿ ಸೀಯಾಳದ ಗೆರಟೆ, ತೆಂಗಿನ ಸಿಪ್ಪೆ ಹಾಗೂ ಇತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಗಟ್ಟಲು ಆಡಳಿತ ಮಂಡಳಿಗಳು ಕಡ್ಡಾಯವಾಗಿ ಪ್ರತ್ಯೇಕ ಡಸ್ಟ್ಬಿನ್ಗಳ ವ್ಯವಸ್ಥೆ ಮಾಡಬೇಕು. ಕಸವನ್ನು ಹಸಿ ಮತ್ತು ಒಣ ತ್ಯಾಜ್ಯವಾಗಿ ಬೇರ್ಪಡಿಸಿ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳುವ ಹೊಣೆಗಾರಿಕೆ ಆಡಳಿತ ಮಂಡಳಿಯದ್ದಾಗಿದೆ. ಭಕ್ತಿಯ ಜೊತೆಗೆ ಸ್ವಚ್ಛತೆಗೂ ಸಮಾನ ಆದ್ಯತೆ ನೀಡಿ, ಸಾರ್ವಜನಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ನಾಗರ ಪಂಚಮಿ ಆಚರಣೆಗೆ ಸಹಕರಿಸಬೇಕಾಗಿ ಮಂಗಳೂರು ಮಹಾನಗರಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









