ಉಡುಪಿ : ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾಗಿರುವ ರಿಜ್ವಾನ್ ಅರ್ಷದ್ ಅವರನ್ನು ಉಡುಪಿ ಜಿಲ್ಲೆಯ ನೂತನ ಉಸ್ತುವಾರಿ ಸಚಿವರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಮೊದಲ ಬಾರಿಗೆ ಸಚಿವ ಸ್ಥಾನ ವಹಿಸಿಕೊಂಡಿರುವ 46 ವರ್ಷದ ಬಿಕಾಂ ಪದವೀಧರ ರಿಜ್ವಾನ್ ಅರ್ಷದ್, 2019ರ ಉಪಚುನಾವಣೆಯಲ್ಲಿ ಪ್ರಥಮ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದರು.
1995-96ರಲ್ಲಿ ಎನ್ಎಸ್ಯುಐ ವಿದ್ಯಾರ್ಥಿ ಘಟಕದ ಮೂಲಕ ತಮ್ಮ ರಾಜಕೀಯ ರಂಗಪ್ರವೇಶ ಮಾಡಿದ ಇವರು, ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. 2004ರಿಂದ 2010ರ ಅವಧಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿಭಾಯಿಸಿದ್ದ ಇವರು, 2011ರಲ್ಲಿ ರಾಜ್ಯ ಯುವ ಕಾಂಗ್ರೆಸ್ನ ಚೊಚ್ಚಲ ಚುನಾಯಿತ ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದರು.
ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿರುವ ಮುಖ್ಯ ಸಮಾರಂಭದಲ್ಲಿ ಸಚಿವ ರಿಜ್ವಾನ್ ಅರ್ಷದ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ವಾಹನದಲ್ಲಿ ಪರೇಡ್ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









