ಮಂಗಳೂರು : ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ‘ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ನೂತನ ಶುದ್ಧೀಕೃತ ಜಲ ಪೂರಣ ಉಪಕರಣವನ್ನು ಸಾರ್ವಜನಿಕ ಸೇವೆಗಾಗಿ ಹಸ್ತಾಂತರಿಸಲಾಯಿತು. ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಅಳವಡಿಸಲಾದ ಈ 80 ಲೀಟರ್ ಸಾಮರ್ಥ್ಯದ ‘ತ್ರೀ ಇನ್ ಒನ್’ ಡಿಜಿಟಲ್ ಮಾದರಿಯ ಉಪಕರಣವನ್ನು ಟ್ರಸ್ಟ್ ಅಧ್ಯಕ್ಷರು ಆಸ್ಪತ್ರೆಯ ಆಡಳಿತ ಮಂಡಳಿಗೆ ಅಧಿಕೃತವಾಗಿ ಸಮರ್ಪಿಸಿದರು.
ಈ ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರು, ಇಂತಹ ಜನಪರ ಹಾಗೂ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳು ಮಹಿಳೆಯರ ಆರೋಗ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಸೋಂಕುರಹಿತ ಹಾಗೂ ಪರಿಶುದ್ಧ ಕುಡಿಯುವ ನೀರು ರೋಗಿಗಳಲ್ಲಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿ, ಅವರ ಆತ್ಮಸ್ಥೈರ್ಯವನ್ನು ವೃದ್ಧಿಸಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ಸೇವೆಗಾಗಿ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ಬಡ ಹಾಗೂ ಅಗತ್ಯವಿರುವ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗಬಾರದು ಎಂಬ ಉನ್ನತ ಉದ್ದೇಶದಿಂದ ಈ ಕೊಡುಗೆ ನೀಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶಮೀಮ್ ಕುಟ್ಟಿಕಳ ತಿಳಿಸಿದರು. ಕಾರ್ಯಕ್ರಮದಲ್ಲಿ ಶುಭ ಹಾರೈಸಿದ ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್ ಸೇರಿದಂತೆ ಹನೀಫ್ ಸಾಲೆತ್ತೂರು, ಶಕೀಲ್ ಹೈದರ್, ಹಬೀಬ್ ಉಳಾಯಿಬೆಟ್ಟು, ರಶೀದ್ ಗಡಿಯಾರ್, ಹಿರಿಯ ತಜ್ಞ ಡಾ. ದಯಾನಂದ್, ಶುಶ್ರೂಷಾಧೀಕ್ಷಕಿ ಗೀತಾ ಮತ್ತು ನರ್ಸಿಂಗ್ ಸೂಪರ್ ವೈಸರ್ ಮಲ್ಲಿಕಾ ಉಪಸ್ಥಿತರಿದ್ದರು. ಶುಶ್ರೂಷಾಧಿಕಾರಿ ಸವಿತಾ ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









