ಉಳ್ಳಾಲ / ಮಂಗಳೂರು : ಕರಾವಳಿಯಿಂದ ಚಾರ್ ಧಾಮ್ ಯಾತ್ರೆಗೆಂದು ಉತ್ತರಾಖಂಡಕ್ಕೆ ತೆರಳಿದ್ದ ಮಂಗಳೂರು ಸಮೀಪದ ಉಳ್ಳಾಲ ತಾಲೂಕು ಕುಂಪಲ ವಿದ್ಯಾನಗರದ ನಿವಾಸಿ ರಾಜೇಶ್ ಗಾಣಿಗ (53) ಅವರು ಯಮುನೋತ್ರಿ ಧಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತಮ್ಮ 14 ಮಂದಿ ಆಪ್ತರ ತಂಡದೊಂದಿಗೆ ಸೆಪ್ಟೆಂಬರ್ 18ರಂದು ಮಂಗಳೂರಿನಿಂದ ರೈಲಿನಲ್ಲಿ ಉತ್ತರ ಭಾರತದ ಧಾರ್ಮಿಕ ಪ್ರವಾಸ ಕೈಗೊಂಡಿದ್ದ ರಾಜೇಶ್, ಹಲವು ಪುಣ್ಯಕ್ಷೇತ್ರಗಳ ದರ್ಶನ ಪಡೆದು ಸೋಮವಾರ ಉತ್ತರಾಖಂಡ ತಲುಪಿ ತಂಗಿದ್ದರು. ಮಂಗಳವಾರ ಬೆಳಿಗ್ಗೆ ಸುಮಾರು 7 ಕಿಲೋಮೀಟರ್ಗಳಷ್ಟು ದೂರದ ಕಠಿಣ ಯಮುನೋತ್ರಿ ಗಿರಿಶಿಖರದ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಅವರು, ದೇವಸ್ಥಾನದ ಸಂಕೀರ್ಣದಲ್ಲಿದ್ದ ಆಸನದಲ್ಲಿ ಕುಳಿತಿದ್ದಾಗಲೇ ಅಕಸ್ಮಾತ್ತಾಗಿ ಅಸ್ವಸ್ಥಗೊಂಡು ಕುಸಿದುಬಿದ್ದರು. ಒಡನಡಿಯಲ್ಲಿದ್ದ ಯಾತ್ರಿಕರು ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರಾದರೂ, ಮಾರ್ಗಮಧ್ಯದಲ್ಲೇ ಜೀವಪಕ್ಷಿ ಹಾರಿಹೋಗಿತ್ತು.
ಜಪ್ಪಿನಮೊಗರುವಿನಲ್ಲಿ ಸ್ವಂತ ವೆಲ್ಡಿಂಗ್ ವರ್ಕ್ಶಾಪ್ ನಡೆಸುತ್ತಿದ್ದ ಇವರು ಪತ್ನಿ, ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಭೌತಿಕ ಶರೀರವನ್ನು ಸದ್ಯ ಉತ್ತರಾಖಂಡದ ಡೆಹ್ರಡೂನ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಕಾಯ್ದಿರಿಸಲಾಗಿದ್ದು, ಸ್ವಗ್ರಾಮ ಕುಂಪಲಕ್ಕೆ ತರಲು ಅಗತ್ಯವಾದ ಪ್ರಕ್ರಿಯೆಗಳು ಸಾಗುತ್ತಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









