ಮಂಗಳೂರು : ಕರಾವಳಿ ನಗರಿ ಮಂಗಳೂರಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ವಿಕೋಪಕ್ಕೆ ತಿರುಗುವ ಆತಂಕ ವ್ಯಕ್ತವಾಗಿದೆ. ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಕರಾವಳಿಯ ಬರ ಪರಿಸ್ಥಿತಿಯ ಕುರಿತು ಧ್ವನಿ ಎತ್ತಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಭವಿಷ್ಯದ ಜಲ ಅಭಾವವನ್ನು ಎದುರಿಸಲು ಸರ್ಕಾರ ತಕ್ಷಣವೇ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಗರಕ್ಕೆ ಪ್ರಮುಖ ಜಲಮೂಲವಾಗಿರುವ ತುಂಬೆ ವೆಂಟೆಡ್ ಡ್ಯಾಂ ಪ್ರಸ್ತುತ 6 ಮೀಟರ್ ಎತ್ತರವನ್ನು ಹೊಂದಿದ್ದು, ಅದರಲ್ಲಿ ಗಣನೀಯ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿರುವ ಶಂಕೆಯಿದೆ. ಹೀಗಾಗಿ ಅಣೆಕಟ್ಟು ಎತ್ತರವನ್ನು ಹೆಚ್ಚಿಸುವುದರೊಂದಿಗೆ ಹೂಳು ತೆಗೆಯುವ ಕಾರ್ಯ ತುರ್ತಾಗಿ ಆಗಬೇಕಿದೆ. ಎತ್ತರ ಹೆಚ್ಚಳದಿಂದಾಗಿ ಮುಳುಗಡೆಯಾಗುವ ಸುತ್ತಮುತ್ತಲಿನ ಭೂಮಾಲೀಕರಿಗೆ ಹಾಗೂ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಸದನದ ಗಮನ ಸೆಳೆದರು.
ಇದರ ಜೊತೆಗೆ, ಕೈಗಾರಿಕೆಗಳ ನೀರಿನ ಅಗತ್ಯವನ್ನು ಪೂರೈಸಲು ಸಮುದ್ರದ ನೀರನ್ನು ಶುದ್ಧೀಕರಿಸುವ (Desalination) ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಅವರು ಸಲಹೆ ನೀಡಿದರು. ಈಗಾಗಲೇ ಎಂಆರ್ಪಿಎಲ್ ಸಂಸ್ಥೆಯು ದಿನಕ್ಕೆ 20 ಎಂಡಿಎಲ್ ಸಮುದ್ರದ ನೀರನ್ನು ಸಂಸ್ಕರಿಸಿ ಬಳಕೆ ಮಾಡುತ್ತಿರುವುದನ್ನು ಉಲ್ಲೇಖಿಸಿದ ಶಾಸಕರು, ನಗರದಲ್ಲಿ ಇಂತಹ ಎರಡು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದರೆ ಕೈಗಾರಿಕೆಗಳಿಗೆ ನಿರಂತರ ನೀರು ಸಿಗುವುದಲ್ಲದೆ, ಕುಡಿಯುವ ನೀರಿನ ಮೇಲಿನ ಒತ್ತಡವೂ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಪ್ರತಿಪಾದಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









