ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ನಗರದಲ್ಲಿ ಹಮ್ಮಿಕೊಂಡಿದ್ದ ‘ವಾಕ್ ವಿತ್ ಕಮಿಷನರ್’ ಕಾರ್ಯಕ್ರಮದ ಅಂಗವಾಗಿ ವಿವಿಧ ಭಾಗಗಳಲ್ಲಿ ಸ್ವತಃ ನಡೆದುಕೊಂಡು ಹೋಗಿ ಸ್ಥಳೀಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಈ ವೇಳೆ ಹಂಪನಕಟ್ಟೆ, ಕೆ.ಬಿ. ಕಟ್ಟೆ, ಲೇಡಿಗೋಷನ್ ರಸ್ತೆ ಹಾಗೂ ಕಾರ್ಸ್ಟ್ರೀಟ್ ಪ್ರದೇಶಗಳಲ್ಲಿ ವ್ಯಾಪಾರಿಗಳು ಸಾರ್ವಜನಿಕರ ಫುಟ್ಪಾತ್ಗಳನ್ನು ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದೆ. ಈ ಒತ್ತುವರಿಗಳನ್ನು ತಕ್ಷಣವೇ ಗುರುತಿಸಿ ಮುಂದಿನ 7 ದಿನಗಳ ಒಳಗಾಗಿ ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರು ಖಡಕ್ ಸೂಚನೆ ನೀಡಿದರು.
ಪರಿಶೀಲನೆ ವೇಳೆ ಹಂಪನಕಟ್ಟೆಯ ಪ್ರಸಿದ್ಧ ಕಾಮತ್ ಹೋಟೆಲ್ಗೆ ಭೇಟಿ ನೀಡಿದ ಆಯುಕ್ತರು, ಹೋಟೆಲ್ನ ಟ್ರೇಡ್ ಲೈಸೆನ್ಸ್ ಅನ್ನು ಪರಿಶೀಲಿಸಿದರು. ಲೈಸೆನ್ಸ್ ನಿಯಮಾನುಸಾರ ವರ್ಗಾವಣೆ (Transfer) ಆಗದಿರುವುದನ್ನು ಗಮನಿಸಿದ ಅವರು, ತಕ್ಷಣವೇ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಲು ಆದೇಶಿಸಿದರು. ಇದೇ ವೇಳೆ ಹೋಟೆಲ್ನ ಅಡುಗೆ ಕೋಣೆಯನ್ನು ಪರಿಶೀಲಿಸಿದಾಗ ಅಲ್ಲಿ ಸರಿಯಾದ ಸ್ವಚ್ಛತೆ ಇಲ್ಲದಿರುವುದು ಹಾಗೂ ಫ್ರಿಡ್ಜ್ನಲ್ಲಿ ಹಳೆಯ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ಗೆ ನೋಟೀಸ್ ನೀಡುವಂತೆ ಆಹಾರ ನಿರೀಕ್ಷಕರಿಗೆ ಸೂಚಿಸಿದ ಆಯುಕ್ತರು, ನಗರದಾದ್ಯಂತ ಇರುವ ಎಲ್ಲಾ ಮಳಿಗೆಗಳ ಟ್ರೇಡ್ ಲೈಸೆನ್ಸ್ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ನಗರದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಪ್ರಮುಖ ಯೋಜನೆಯೊಂದರ ಮಾಹಿತಿಯನ್ನು ಆಯುಕ್ತ ರಾಹುಲ್ ರತ್ನಂ ಪಾಂಡೆ ಹಂಚಿಕೊಂಡರು. ಮಂಗಳೂರಿನ ರಾರಾಜಿ ಪಾರ್ಕ್ನಲ್ಲಿ ನಿರ್ಮಿಸಲಾಗಿರುವ ಆಂಫಿಥಿಯೇಟರ್ನಲ್ಲಿ ಇನ್ನು ಮುಂದೆ ಪ್ರತಿ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಮುಂಬರುವ 20 ದಿನಗಳಲ್ಲಿ ಈ ಯೋಜನೆಗೆ ಚಾಲನೆ ಸಿಗಲಿದ್ದು, ಸ್ಥಳೀಯ ವಿವಿಧ ಕಲಾ ತಂಡಗಳು ಹಾಗೂ ಕಲಾವಿದರಿಗೆ ತಮ್ಮ ಕಲೆ ಪ್ರದರ್ಶಿಸಲು ಪಾಲಿಕೆಯಿಂದ ವೇದಿಕೆ ಕಲ್ಪಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









