ಮಂಗಳೂರು, ಸೆಪ್ಟೆಂಬರ್ 30: ಮಂಗಳೂರಿನ ಎಂಆರ್ಪಿಎಲ್ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಭಾರಿ ಸ್ಫೋಟದ ಸ್ಥಳಕ್ಕೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಬುಧವಾರ ತುರ್ತು ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದರು. ಈ ವೇಳೆ ಕಂಪನಿಯ ಉನ್ನತಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಲ್ಲದೆ ಕಾರ್ಮಿಕರ ಸುರಕ್ಷತೆ ಮತ್ತು ಪರಿಹಾರದ ಕುರಿತು ಸಾಲು ಸಾಲು ಸೂಕ್ತ ನಿರ್ದೇಶನಗಳನ್ನು ನೀಡಿದರು. ಎಂಆರ್ಪಿಎಲ್ನಲ್ಲಿ ಸಂಭವಿಸಿದ ಭೂಕಂಪನ ಮಾದರಿಯ ಭೀಕರ ಸ್ಫೋಟವು ಸುರತ್ಕಲ್ ಸೇರಿದಂತೆ ಇಡೀ ಮಂಗಳೂರು ನಗರದ ಜನತೆಯನ್ನು ಆತಂಕಕ್ಕೆ ದೂಡಿದ್ದು, ಇದು ಅಪಾಯದ ಮುನ್ಸೂಚನೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಆರಂಭಿಕ ವರದಿಗಳಲ್ಲಿ 9 ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿತ್ತಾದರೂ, ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಕರ್ತವ್ಯ ನಿರತ ನೌಕರರೊಬ್ಬರು ದುರಂತವಾಗಿ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದ್ದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ ಎಂದು ಶಾಸಕರು ಕಂಬನಿ ಮಿಡಿದರು. ಈ ದುರಂತವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೃತ ಕಾರ್ಮಿಕನ ಕುಟುಂಬಕ್ಕೆ ಗರಿಷ್ಠ ಮಟ್ಟದ ವಿಶೇಷ ಪರಿಹಾರ ಒದಗಿಸಬೇಕು. ಗಾಯಗೊಂಡ ಎಲ್ಲಾ ಸಿಬ್ಬಂದಿಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಕಂಪನಿಯೇ ಭರಿಸಿ, ಸೂಕ್ತ ಪರಿಹಾರ ತಲುಪಿಸಬೇಕು ಎಂದು ಅವರು ಎಂಆರ್ಪಿಎಲ್ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.
ಇಂತಹ ಅಪಾಯಕಾರಿ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಜೀವದ ಹದನವಿಲ್ಲದೆ ಕೆಲಸ ಮಾಡುವ ಪ್ರತಿಯೊಬ್ಬ ನೌಕರನಿಗೂ ಎಂಆರ್ಪಿಎಲ್ ಸಂಸ್ಥೆಯು ತಕ್ಷಣವೇ ಸಮಗ್ರ ಆರೋಗ್ಯ ಸುರಕ್ಷಾ ಸೌಲಭ್ಯ ಹಾಗೂ ಆಧುನಿಕ ರಕ್ಷಣಾ ಮೂಲಸೌಕರ್ಯಗಳನ್ನು ಖಾತ್ರಿಪಡಿಸಬೇಕು ಎಂದು ಶಾಸಕರು ಸೂಚಿಸಿದರು. ಅಲ್ಲದೆ ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಮನೆಗಳು ಹಾಗೂ ಕಟ್ಟಡಗಳಿಗೆ ಹಾನಿಯಾಗಿದ್ದರೆ ತಕ್ಷಣವೇ ಸಮೀಕ್ಷೆ ನಡೆಸಿ ಸೂಕ್ತ ನಷ್ಟಪರಿಹಾರ ವಿತರಿಸಬೇಕು ಎಂದರು. ಸ್ಫೋಟಕ್ಕೆ ನಿಖರ ಕಾರಣ ಪತ್ತೆಹಚ್ಚಲು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಬಳಿಕ, ಶಾಸಕರು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಮೃತ ನೌಕರನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









