ಶಿರ್ವ: ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ಅವಿವಾಹಿತ ಮಹಿಳೆಗೆ ಹೆರಿಗೆಯಾದ ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಆರೋಪಿಗಳನ್ನು ಶಿರ್ವ ಪೊಲೀಸರು ಬಂಧಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಿಸಿ ರೋಡ್ನ ವೈದ್ಯ ಡಾ| ಸೋಮೇಶ್ ಸೊಲೊಮನ್, ಮಂಗಳೂರಿನ ಪಿಜಿ ಮಾಲಕಿ ವಿಜಯಲಕ್ಷ್ಮಿ ಆಲಿಯಾಸ್ ವಿಜಯ ಮತ್ತು ಅತ್ಯಾಚಾರ ಆರೋಪಿ ನವನೀತ್ ನಾರಾಯಣ ಬಂಧಿತರು.
ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ 92ನೇ ಹೇರೂರು ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪ್ರಭಾವತಿ ಮತ್ತು ರಮೇಶ್ ಮೂಲ್ಯ ದಂಪತಿ 4 ದಿನದ ಶಿಶುವನ್ನು ಪೋಷಣ್ ಟ್ರ್ಯಾಕರ್ ನಲ್ಲಿ ರಿಜಿಸ್ಟರ್ ಮಾಡಲು ಹೇರೂರು ಅಂಗನವಾಡಿಗೆ ಕರೆದುಕೊಂಡು ಬಂದಿದ್ದರು. ಆ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಮಕ್ಕಳಿಲ್ಲದೇ ಇರುವ ದಂಪತಿಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಗೆ ತಿಳಿದು ಬಂದಿದ್ದು, ಅವರದಲ್ಲದ ಮಗುವಿನ ಬಗ್ಗೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ಅವಿವಾಹಿತ ಮಹಿಳೆಗೆ ಹೆರಿಗೆಯಾಗಿದ್ದು, ಹಣ ನೀಡಿ ಆಸ್ಪತ್ರೆಯ ಮೂಲಕ ಮಗುವನ್ನು ಪಡೆದುಕೊಂಡು ಬಂದಿರುವುದಾಗಿ ದಂಪತಿ ಅಂಗನವಾಡಿ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದಾರೆ . ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಶಿರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಶಿರ್ವಪೊಲೀಸರು ಪ್ರಭಾವತಿಯವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಹೆಣ್ಣು ಮಗು ಆಗಸ್ಟ್ . 3 ರಂದು ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ಜನಿಸಿದ್ದು, ಆಸ್ಪತ್ರೆಯ ವೈದ್ಯರು ತಮಗೆ ನೀಡಿರುವುದಾಗಿ ದಂಪತಿ ತಿಳಿಸಿದ್ದಾರೆ.
ವಿಜಯಲಕ್ಷ್ಮೀ ಅವರು ಅವಿವಾಹಿತ ಗರ್ಭಿಣಿ ಮಹಿಳೆ ಮತ್ತು ಆಕೆಯ ತಾಯಿಗೆ ತನ್ನ ಪಿಜಿಯಲ್ಲಿ ಕೆಲಸ ಕೊಡಿಸಿ ಆಶ್ರಯ ನೀಡಿದ್ದರು. ಪ್ರಭಾವತಿ ಅವರ ಚಿಕ್ಕಮ್ಮನ ಮಗಳು ಪ್ರಿಯಾಂಕ ಮಕ್ಕಳಿಲ್ಲದ ದಂಪತಿಗೆ ಮಂಗಳೂರಿನ ವಿಜಯಲಕ್ಷ್ಮೀ ಅವರನ್ನು ಪರಿಚಯಿಸಿದ್ದು, ಅವಿವಾಹಿತ ಮಹಿಳೆ ಹೆರಿಗೆಯಾದ ಬಳಿಕ ಮಗು ನೀಡುವುದಾಗಿ ಮಾತುಕತೆ ನಡೆಸಿದ್ದರು. ಹೆರಿಗೆಯಾದ ಬಳಿಕ ಆಸ್ಪತ್ರೆಯ ವೈದ್ಯರ ಮೂಲಕ ರೂ 4.5 ಲಕ್ಷ ಹಣವನ್ನು ನೀಡಿ ದಂಪತಿ ಹೆಣ್ಣುಮಗುವನ್ನು ಪಡೆದುಕೊಂಡು ಬಂದಿದ್ದಾರೆ . ಮಾನಸಿಕ ಆಸ್ವಸ್ಥೆಯಾಗಿದ್ದ ಮಗುವಿನ ತಾಯಿ ಅತ್ಯಾಚಾರಕ್ಕೆ ಒಳಗಾಗಿದ್ದು, ಆಕೆಯ ಪರಿಚಯದ ನವನೀತ್ ನಾರಾಯಣ ಅತ್ಯಾಚಾರ ನಡೆಸಿದ್ದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಒಳಗೊಂಡ ಆಪಾದಿತರಾದ ಬಿಸಿ ರೋಡ್ನ ವೈದ್ಯ ಡಾ|ಸೋಮೇಶ್ ಸೊಲೊಮನ್, ವಿಜಯಲಕ್ಷ್ಮೀ ಅಲಿಯಾಸ್ ವಿಜಯ ಮತ್ತು ನವನೀತ್ ನಾರಾಯಣ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಶಿರ್ವಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾರ್ಕಳ ಡಿವೈಎಸ್ಪಿ ಡಾ| ಹರ್ಷಾ ಪ್ರಿಯಂವದಾ ಅವರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









