ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ತಮ್ಮ ಇಲೆಕ್ಟ್ರಿಕ್ ರಿಕ್ಷಾವನ್ನು ನಿಲ್ಲಿಸಿ ಚಾಲಕರೊಬ್ಬರು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಘಟನೆ ನಡೆದ ಸ್ಥಳದ ಪರಿಸ್ಥಿತಿಯನ್ನು ಅವಲೋಕಿಸಿದ ಸ್ಥಳೀಯರು, ಅವರು ನೇತ್ರಾವತಿ ನದಿಗೆ ಹಾರಿರುವ ಸಾಧ್ಯತೆಯ ಬಗ್ಗೆ ತೀವ್ರ ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಣೆಯಾದ ಈ ವ್ಯಕ್ತಿಯನ್ನು ಮಾರ್ನಬೈಲು ನಿವಾಸಿ ಪ್ರೀತಂ ಲೋಬೋ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಸುಮಾರು 8 ಗಂಟೆ ಸುಮಾರಿಗೆ ತಮ್ಮ ರಿಕ್ಷಾವನ್ನು ಸೇತುವೆಯ ಮಧ್ಯ ಭಾಗದಲ್ಲಿ ನಿಲ್ಲಿಸಿ ಪ್ರೀತಂ ಲೋಬೋ ಅವರು ನಾಪತ್ತೆಯಾಗಿದ್ದಾರೆ. ದೀರ್ಘಕಾಲದವರೆಗೆ ರಿಕ್ಷಾ ಹಾಗೆಯೇ ನಿಂತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ರಿಕ್ಷಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ, ಬಂಟ್ವಾಳ ನಗರ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಶಂಕೆಯ ಹಿನ್ನೆಲೆಯಲ್ಲಿ, ನೇತ್ರಾವತಿ ನದಿಯಲ್ಲಿ ಪ್ರೀತಂ ಲೋಬೋ ಅವರ ಪತ್ತೆಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









